ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಅವ್ಯವಸ್ಥೆ : ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಸತೀಶ್ ಪೂಜಾರಿ ಕೀಳಂಜೆ ಆಗ್ರಹ

0
8

ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಬೀದಿ ನಾಯಿಗಳ ಹಾವಳಿ, ಕುಡುಕರ ಕಾಟ ಹಾಗೂ ಅಪಾಯಕಾರಿ ಪರಿಸ್ಥಿತಿಗಳಿಂದ ಸಾರ್ವಜನಿಕರು ಮತ್ತು ಮಕ್ಕಳು ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಣ್ಣ ಮಕ್ಕಳ ಆಟದ ಉದ್ಯಾನವನವಾಗಿರುವ ಈ ಪಾರ್ಕ್‌ಗೆ ಪ್ರತಿದಿನ ಸಾವಿರಾರು ಜನರು ವಾಕಿಂಗ್ ಹಾಗೂ ವಿಶ್ರಾಂತಿಗಾಗಿ ಆಗಮಿಸುತ್ತಿದ್ದಾರೆ. ಆದರೆ ಪಾರ್ಕ್‌ನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ತುಂಬಿಕೊಂಡಿರುವುದು, ಒಣಗಿದ ಮರಗಳ ಕೊಂಬೆಗಳು ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿರುವುದು, ತುಕ್ಕು ಹಿಡಿದ ಆಟದ ಸಾಮಗ್ರಿಗಳು ಹಾಗೂ ಹಾಳಾದ ಬೆಂಚುಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಇದಲ್ಲದೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ. ಈಗಾಗಲೇ ನಾಯಿ ಕಡಿತದ ಘಟನೆಗಳು ನಡೆದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಪಾರ್ಕ್ ಒಳಗೆ ಕುಡುಕರು ಮತ್ತು ಅಸಭ್ಯವಾಗಿ ವರ್ತಿಸುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕುಟುಂಬ ಸಮೇತರಾಗಿ ಬರುವವರಿಗೆ ಅಸೌಕರ್ಯ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪಾರ್ಕ್‌ನಲ್ಲಿ ಸಮರ್ಪಕ ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಬೇಕು. ಹೊಸ ಆಟದ ಸಾಮಗ್ರಿಗಳನ್ನು ಅಳವಡಿಸುವ ತನಕ ಮಕ್ಕಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು. ಅಪಾಯಕಾರಿ ಮರದ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಿ, ಬೀದಿ ನಾಯಿಗಳ ಪ್ರವೇಶ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಮಕ್ಕಳ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಭುಜಂಗ ಪಾರ್ಕ್‌ನಲ್ಲಿನ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ತುಳುನಾಡ ರಕ್ಷಣೆ ವೇದಿಕೆ ಉಡುಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ನಡುಮನೆ, ರೋಶನ್ ಡಿಸೋಜ ಅಮುಂಜಿ ಸೇರಿದಂತೆ ಹಲವರು ಈ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here