ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪ ಕೊಕ್ಕರಕಲ್ ಬಳಿ ಕಾರಿಗೆ ಡಿಕ್ಕಿ ಹೊಡೆದು ಕಂಟೈನರ್ ಪರಾರಿಯಾಗಿದ್ದು ಕಾರಿನಲ್ಲಿದ್ದ ಸುಭಾಷ್ ನಗರ ನಿವಾಸಿಗಳಾದ ಚಾಲಕ ಶ್ರವಣ್ (23), ರಾಜೇಂದ್ರ (,57), ಮಗು ಸುನಮ್ಯಾ (10) ಪವಾಡ ಸದೃಶ ಪಾರಾಗಿದ್ದಾರೆ.
ಉಡುಪಿ ಜಿಲ್ಲೆಯ ಶಂಕರಪುರ ಸುಭಾಷ್ ನಗರದಿಂದ ಸುರತ್ಕಲ್ ಸಮೀಪದ ಕಳವಾರು ಬೆಂಕಿನಾಥೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದ ಕಾರು ಮುಲ್ಕಿ ಸಮೀಪದ ಕೊಕ್ಕರಕಲ್ ತಲುಪುತ್ತಿದ್ದಂತೆ ಅದೇ ದಿಕ್ಕಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಕಂಟೈನರ್ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಹೋಗಿ ಬಿದ್ದಿದ್ದು ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಿಂದ ಕಾರಿನ ಎದುರು ಹಾಗೂ ಹಿಂಭಾಗ ಜಖಂಗೊಂಡಿದ್ದು,ಟೋಯಿಂಗ್ ವಾಹನದ ಮೂಲಕ ಕಾರನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
ಅಪಘಾತ ನಡೆದ ಕೊಕ್ಕರಕಲ್ ಪ್ರದೇಶದಲ್ಲಿ ದಾರಿದೀಪದ ಅವ್ಯವಸ್ಥೆ ಕಾಡುತ್ತಿದ್ದು ಕೂಡಲೇ ಈ ಭಾಗದಲ್ಲಿ ಹೆದ್ದಾರಿ ಇಲಾಖೆ ದಾರಿದೀಪ ಅಳವಡಿಸಬೇಕು ಎಂದು ಸ್ಥಳೀಯ ಆಟೋ ಚಾಲಕ ಪುಷ್ಪರಾಜ್ ಚಿತ್ರಾಪು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.

