ಪುತ್ತಿಗೆ ಶ್ರೀಗಳ ದರ್ಶನ ಪಡೆದ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಜೀ
ಉಡುಪಿ: ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷರೂ, ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿಗಳೂ ಆದ ಶ್ರೀ ಅಲೋಕ್ ಕುಮಾರ್ ಜೀ ಅವರು ಇಂದು ಪುತ್ತಿಗೆ ಮೂಲಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.
ಮೂಲಮಠಕ್ಕೆ ಆಗಮಿಸಿದ ಅವರನ್ನು ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ವೇದಘೋಷದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಬಳಿಕ ಅವರು ಶ್ರೀ ಕಂಬದ ಗಣಪತಿ, ಶ್ರೀ ನರಸಿಂಹ ದೇವರು ಹಾಗೂ ಶ್ರೀ ಮುಖ್ಯಪ್ರಾಣ ದೇವರ ದರ್ಶನ ಪಡೆದರು. ವಿದ್ಯಾಪೀಠದಲ್ಲಿ ನಡೆಯುತ್ತಿರುವ ವೇದಾಧ್ಯಯನ, ಧಾರ್ಮಿಕ ಶಿಕ್ಷಣ ಮತ್ತು ವಿವಿಧ ಸೇವಾ ಚಟುವಟಿಕೆಗಳ ಕುರಿತು ಶ್ರೀಪಾದರು ಅವರಿಗೆ ವಿವರಿಸಿದರು.
ನಂತರ ನಡೆದ ಸರಳ ಸಮಾರಂಭದಲ್ಲಿ ಪರಮಪೂಜ್ಯ ಶ್ರೀಪಾದರು ಅಲೋಕ್ ಕುಮಾರ್ ಜೀ ಅವರನ್ನು ಗೌರವಿಸಿ, ಹಿಂದೂ ಸಮಾಜದ ಸಂಘಟನೆ, ಸನಾತನ ಧರ್ಮದ ಸಂರಕ್ಷಣೆ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಕಾರ್ಯವಿಸ್ತಾರಕ್ಕಾಗಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿ ಆಶೀರ್ವದಿಸಿದರು. ಅಲೋಕ್ ಕುಮಾರ್ ಜೀ ಅವರು ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಪರಮಪೂಜ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶ್ರೀ ಶರಣ್ ಪಂಪ್‌ವೆಲ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀ ಸುನಿಲ್ ಕೆ.ಆರ್., ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀ ವಿಷ್ಣುಮೂರ್ತಿ ಆಚಾರ್ಯ, ಉಡುಪಿ ಜಿಲ್ಲಾ ಕಾರ್ಯದರ್ಶಿ ಶ್ರೀ ದಿನೇಶ್ ಮೆಂಡನ್, ಬಿಜೆಪಿ ಜಿಲ್ಲಾ ವಕ್ತಾರ ಶ್ರೀ ಮಧುಕರ ಮುದ್ರಾಡಿ, ಅರ್ಚಕ–ಪುರೋಹಿತ–ಮಠ–ಮಂದಿರ ಪ್ರಮುಖರಾದ ಶ್ರೀ ಗಿರೀಶ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ ಅವರು ಗಣ್ಯರನ್ನು ಸ್ವಾಗತಿಸಿದರು. ಸುಗುಣ ಶಾಲೆಯ ಶ್ರೀ ಪ್ರಮೋದ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯರಾದ ಡಾ. ಸುನೀಲ್ ಆಚಾರ್ಯ ಅವರು ವಂದಿಸಿದರು.

