30 ಅಡಿ ಬಾವಿಗೆ ಬಿದ್ದು 20 ಅಡಿ ಸುರಂಗದಲ್ಲಿ ಸಿಲುಕಿದ್ದ ವ್ಯಕ್ತಿಯ ಯಶಸ್ವಿ ರಕ್ಷಣೆ

0
180

ಮೂಡುಬಿದಿರೆ : ಕತ್ತಲೆಯಲ್ಲಿ ದಾರಿ ತಪ್ಪಿ 30 ಅಡಿ ಆಳದ ಬಾವಿಗೆ ಬಿದ್ದು, ಅಲ್ಲಿಂದ ಒಳಗಿನ 20 ಅಡಿ ಆಳದ ಸುರಂಗದ ಗುಂಡಿಯೊಳಗೆ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯ ಮೂಲಕ ರಕ್ಷಿಸಿದ್ದಾರೆ .ಮೂಡುಬಿದಿರೆ ತಾಲೂಕಿನ ಕಾರ್ಕಳ ಗಡಿ ಭಾಗದ ಪುತ್ತಿಗೆ ಪದವು ಬಂಗ್ಲೆ ನಿವಾಸಿ ರಾಧಾಕೃಷ್ಣ (38) ಎಂಬವರು ರಾತ್ರಿ ದಾರಿ ತಪ್ಪಿ ಈ ಅವಘಡಕ್ಕೆ ಸಿಲುಕಿದ್ದಾರೆ.

ರಾತ್ರಿ ವೇಳೆ ಸುತ್ತಲೂ ಕತ್ತಲು ಆವರಿಸಿದ್ದ ಸಂದರ್ಭದಲ್ಲಿ ನಡೆಯುತ್ತಿದ್ದಾಗ, ಆವರಣ ಗೋಡೆ ಇಲ್ಲದ ಬಾವಿಯೊಂದು ರಾಧಾಕೃಷ್ಣ ಅವರ ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ ಅವರು ನೇರವಾಗಿ 30 ಅಡಿ ಆಳದ ಬಾವಿಯೊಳಗೆ ಬಿದ್ದಿದ್ದಾರೆ.ಅಲ್ಲಿಂದ ಬಾವಿಯ ತಳಭಾಗದಲ್ಲಿ ಸುಮಾರು 20 ಅಡಿ ಉದ್ದದ ಸುರಂಗವಿದ್ದು (ಗುಂಡಿ), ರಾಧಾಕೃಷ್ಣ ಅವರು ಬಿದ್ದ ರಭಸಕ್ಕೆ ನೇರವಾಗಿ ಆ ಸುರಂಗದೊಳಕ್ಕೆ ಜಾರಿ ಬಿದ್ದಿದ್ದಾರೆ. ಸುಮಾರು 50 ಅಡಿಗಳಿಗೂ ಹೆಚ್ಚು ಆಳದಲ್ಲಿ, ಕಡು ಕತ್ತಲೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವರು ಹೊರಬರಲಾರದೆ ಒದ್ದಾಡುತ್ತಿದ್ದರು. ಇವರ ಬೊಬ್ಬೆ ಕೇಳಿದ್ದ ಸ್ಥಳೀಯ ಕಾರ್ಮಿಕರು ಗಮನಿಸಿ ​ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಅಗ್ನಿಶಾಮಕ ರಕ್ಷಣಾ ತಂಡ ಕಾರ್ಯಚರಣೆ ಆರಂಭಿಸಿದರು. ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜಯಮೂಲ್ಯ, ರೂಪೇಶ್, ನಿತ್ಯಾನಂದ, ಬಸವರಾಜ ಮತ್ತು ಗಣೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here