ಬೆಂಗಳೂರು : ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 2047ರ ‘ವಿಕಸಿತ ಭಾರತ’ ಮತ್ತು ‘ಆತ್ಮನಿರ್ಭರ ಭಾರತ’ ದೃಷ್ಟಿಕೋನಕ್ಕೆ ಪೂರಕವಾದ, ಜನರ ಆಕಾಂಕ್ಷೆಗಳು ಮತ್ತು ಅಂತರ್ಗತ ಬೆಳವಣಿಗೆಯನ್ನು ಸಮತೋಲನಗೊಳಿಸುವ ಕೇಂದ್ರ ಬಜೆಟ್ 2026-27 ಅನ್ನು ಸಿಮೆಂಟ್ ತಯಾರಕರ ಸಂಘ ಮುಕ್ತವಾಗಿ ಸ್ವಾಗತಿಸಿದೆ.
ಕಳೆದ 12 ವರ್ಷಗಳಲ್ಲಿ ಭಾರತದ ಸ್ಥಿರ ಆರ್ಥಿಕ ಪಥ, ವಿತ್ತೀಯ ಶಿಸ್ತು, ಸುಸ್ಥಿರ ಬೆಳವಣಿಗೆ ಮತ್ತು ಸಾಧಾರಣ ಹಣದುಬ್ಬರವನ್ನು ಈ ಬಜೆಟ್ ಒತ್ತಿಹೇಳುತ್ತದೆ. ಇದು ಸಿಮೆಂಟ್‌ನಂತಹ ಮೂಲಸೌಕರ್ಯ ಸಂಬಂಧಿತ ವಲಯಗಳಿಗೆ ಉತ್ತಮ ಬೇಡಿಕೆಯ ಮುನ್ಸೂಚನೆಯನ್ನು ನೀಡಿದೆ.
ಸಾರ್ವಜನಿಕ ಬಂಡವಾಳ ವೆಚ್ಚವನ್ನು (Capex) 2025-26ರ ಹಣಕಾಸು ವರ್ಷದ 11.2 ಲಕ್ಷ ಕೋಟಿ ರೂಪಾಯಿಗಳಿಂದ 2026-27ರ ಹಣಕಾಸು ವರ್ಷದಲ್ಲಿ 12.2 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ, ಮೂಲಸೌಕರ್ಯವೇ ಆರ್ಥಿಕ ಬೆಳವಣಿಗೆಯ ಪ್ರಾಥಮಿಕ ಆಧಾರ ಎಂಬುದನ್ನು ಬಜೆಟ್ ಗುರುತಿಸಿದೆ. ಇದು ಭಾರತೀಯ ಸಿಮೆಂಟ್ ಉದ್ಯಮಕ್ಕೆ ಪೂರಕವಾದ ಭವಿಷ್ಯವನ್ನು ಸೃಷ್ಟಿಸಿದೆ. 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ಹಂತದ ಮತ್ತು 3ನೇ ಹಂತದ ನಗರಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಹಾಗೂ ಪ್ರತಿ ನಗರಕ್ಕೆ 5 ವರ್ಷಗಳವರೆಗೆ 5,000 ಕೋಟಿ ರೂ. ಹಂಚಿಕೆಯೊಂದಿಗೆ ‘ನಗರ ಆರ್ಥಿಕ ಪ್ರದೇಶಗಳ’ (CERs) ರಚನೆಯು ವಸತಿ, ಸಾರಿಗೆ ಮತ್ತು ನಗರ ಸೇವೆಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ವೇಗಗೊಳಿಸಲಿದೆ.
ಬಜೆಟ್‌ನಲ್ಲಿ ಘೋಷಿಸಲಾದ ಲಾಜಿಸ್ಟಿಕ್ಸ್ ಮತ್ತು ಸಂಪರ್ಕ ಕ್ರಮಗಳು ಸಿಮೆಂಟ್ ಉದ್ಯಮಕ್ಕೆ ವಿಶೇಷವಾಗಿ ಮಹತ್ವದ್ದಾಗಿವೆ. ಹೊಸ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ಗಳು, ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿ 20 ರಾಷ್ಟ್ರೀಯ ಜಲಮಾರ್ಗಗಳ ಕಾರ್ಯಾಚರಣೆ, ಜಲಮಾರ್ಗಗಳ ಪಾಲನ್ನು 6% ರಿಂದ 12% ಕ್ಕೆ ಹೆಚ್ಚಿಸಲು ‘ಕೋಸ್ಟಲ್ ಕಾರ್ಗೋ ಪ್ರಮೋಷನ್ ಸ್ಕೀಮ್’ ಮತ್ತು ಹಡಗು ದುರಸ್ತಿ ಪರಿಸರ ವ್ಯವಸ್ಥೆಯ ಅಭಿವೃದ್ಧಿಯು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ. ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆಯು ಪ್ರಾದೇಶಿಕ ಅಭಿವೃದ್ಧಿ ಮತ್ತು ನಿರ್ಮಾಣ ಬೇಡಿಕೆಯನ್ನು ಮತ್ತಷ್ಟು ಉತ್ತೇಜಿಸುವ ನಿರೀಕ್ಷೆಯಿದೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿದ ಸಿಮೆಂಟ್ ತಯಾರಕರ ಸಂಘದ (CMA) ಅಧ್ಯಕ್ಷರಾದ ಪಾರ್ಥ್ ಜಿಂದಾಲ್ ಅವರು, “ಭಾರತವು ‘ವಿಕಸಿತ ಭಾರತ’ದತ್ತ ಮುನ್ನಡೆಯುತ್ತಿರುವಾಗ, ಬಜೆಟ್‌ನಲ್ಲಿ ಉಲ್ಲೇಖಿಸಲಾದ ಮೂರು ಕರ್ತವ್ಯಗಳು ರಾಷ್ಟ್ರದ ಬೆಳವಣಿಗೆಗೆ ಸ್ಪಷ್ಟ ಹಾದಿಯನ್ನು ರೂಪಿಸಿವೆ. ಉತ್ಪಾದನಾ ಸ್ಪರ್ಧಾತ್ಮಕತೆ, ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ಆಧುನೀಕರಣಕ್ಕೆ ನೀಡಿರುವ ನಿರಂತರ ಒತ್ತು ಶ್ಲಾಘನೀಯ. ಜಿಎಸ್‌ಟಿ ಸರಳೀಕರಣ, ಕಾರ್ಮಿಕ ಸಂಹಿತೆಗಳು ಮತ್ತು ಗುಣಮಟ್ಟ ನಿಯಂತ್ರಣ ಸುಧಾರಣೆ ಸೇರಿದಂತೆ 350ಕ್ಕೂ ಹೆಚ್ಚು ಸುಧಾರಣೆಗಳು ಸಿಮೆಂಟ್‌ನಂತಹ ಬಂಡವಾಳ ಕೇಂದ್ರಿತ ವಲಯಗಳಿಗೆ ಹೂಡಿಕೆಯ ವಾತಾವರಣವನ್ನು ಬಲಪಡಿಸುತ್ತವೆ. ಸಿಮೆಂಟ್ ಸೇರಿದಂತೆ ವಿವಿಧ ವಲಯಗಳಿಗೆ ಘೋಷಿಸಲಾದ 20,000 ಕೋಟಿ ರೂಪಾಯಿಗಳ ಸಿಸಿಯುಎಸ್ (ಕಾರ್ಬನ್ ಕ್ಯಾಪ್ಚರ್, ಯುಟಿಲೈಸೇಶನ್ ಅಂಡ್ ಸ್ಟೋರೇಜ್) ಹಂಚಿಕೆಯು ಉದ್ಯಮದ ಡಿಕಾರ್ಬನೈಸೇಶನ್ (ಇಂಗಾಲದ ಹೊರಸೂಸುವಿಕೆ ಕಡಿತ) ಪ್ರಕ್ರಿಯೆಯನ್ನು ಬದಲಿಸಲಿದೆ. 2070ರ ವೇಳೆಗೆ ಭಾರತ ಸರ್ಕಾರದ ‘ನೆಟ್ ಝೀರೋ’ ಬದ್ಧತೆಗೆ ಸಿಮೆಂಟ್ ಉದ್ಯಮವು ಸಂಪೂರ್ಣವಾಗಿ ಕೈಜೋಡಿಸಿದೆ” ಎಂದು ಹೇಳಿದರು.
ಸಿಎಂಎ (CMA) ಉಪಾಧ್ಯಕ್ಷರಾದ ಡಾ. ರಾಘವಪತ್ ಸಿಂಘಾನಿಯಾ ಮಾತನಾಡಿ, “ಸರ್ಕಾರದ ನಿರಂತರ ಮೂಲಸೌಕರ್ಯ ಕ್ಷೇತ್ರದ ಮೇಲಿನ ಗಮನವು ಉದ್ಯೋಗಾವಕಾಶ, ಪ್ರಾದೇಶಿಕ ಅಭಿವೃದ್ಧಿ ಮತ್ತು ಸ್ಥಳೀಯ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ. ಸಾರ್ವಜನಿಕ ಬಂಡವಾಳ ವೆಚ್ಚದ ಹೆಚ್ಚಳ, ಪ್ರವಾಸೋದ್ಯಮ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಮೇಲಿನ ಹೂಡಿಕೆಗಳು ಸಿಮೆಂಟ್ ವಲಯದ ಬೆಳವಣಿಗೆಗೆ ವೇಗ ನೀಡಲಿವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಮೂಲಸೌಕರ್ಯಗಳ ಬಲವರ್ಧನೆ ಮತ್ತು ಈಶಾನ್ಯ ರಾಜ್ಯಗಳ ಸಂಪರ್ಕಕ್ಕೆ ನೀಡಿರುವ ಆದ್ಯತೆಯು ಸಿಮೆಂಟ್ ವಲಯದ ಪಾತ್ರವನ್ನು ಇನ್ನಷ್ಟು ಹೆಚ್ಚಿಸುತ್ತದೆ” ಎಂದರು.
ಹಣಕಾಸು ವರ್ಷ 2026-27ಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ 4.3% ಕ್ಕೆ ಅಂದಾಜಿಸಿರುವುದು ಸರ್ಕಾರದ ಆರ್ಥಿಕ ಶಿಸ್ತನ್ನು ತೋರಿಸುತ್ತದೆ ಎಂದು ಸಿಎಂಎ (CMA) ಧನಾತ್ಮಕವಾಗಿ ಗುರುತಿಸಿದೆ. ವಿಕಸಿತ ಭಾರತ 2047 ರ ಗುರಿಯನ್ನು ತಲುಪಲು ಸುಸ್ಥಿರ ಮೂಲಸೌಕರ್ಯ ನಿರ್ಮಿಸುವಲ್ಲಿ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಿಮೆಂಟ್ ಉದ್ಯಮವು ಬದ್ಧವಾಗಿದೆ.

