ಮಂಗಳೂರು : ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಉಚಿತ ಶ್ರವಣ ತಪಾಸಣಾ ಶಿಬಿರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಉದ್ಘಾಟಿಸಿದರು.
ಶ್ರವಣ ದೋಷದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಸಮಾಜದಲ್ಲಿ ಸಾಕಷ್ಟು ಮಂದಿ ಶ್ರವಣ ದೋಷದ ಕಾರಣದಿಂದ ತೊಂದರೆ ಅನುಭವಿಸುತ್ತಿದ್ದರೆ. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಟೀಮ್ ಈಶ್ವರ್ ಮಲ್ಪೆ ತಂಡದ ಸಂಚಾಲಕ ಲವ ಬಂಗೇರಾ ಮಾತನಾಡಿ ರಾಜ್ಯದ ವಿವಿಧೆಡೆ ಉಚಿತ ಶ್ರವಣ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಟೀಮ್ ಈಶ್ವರ್ ಮಲ್ಪೆ ತಂಡದಿಂದ ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮವೂ ನಡೆಯುತ್ತಿದೆ ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಶ್ರವಣ ತಜ್ಞೆ ಡಾ.ಅಂಕಿತಾ , ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವಿಲ್ಪ್ರೆಡ್ ಡಿಸೋಜ, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು .ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಸ್ವಾಗತಿಸಿದರು.

