ಬೈಂದೂರು : ಬೈಂದೂರು ಕ್ಷೇತ್ರದ ಹಿರಿಯ ರಾಜಕೀಯ ಮುತ್ಸದ್ದಿ, ಧಾರ್ಮಿಕ-ಸಾಮಾಜಿಕ ಸೇವೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ಬಿ. ಅಪ್ಪಣ್ಣ ಹೆಗ್ಡೆ ಅವರ ನಿಧನದ ಸುದ್ದಿ ತಿಳಿದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ ಜೀವನ, ಉನ್ನತ ಚಿಂತನೆ ಮತ್ತು ಸೇವಾ ಮನೋಭಾವದೊಂದಿಗೆ ಧಾರ್ಮಿಕ, ಶಿಕ್ಷಣ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಅವರು ಜನಪ್ರಿಯ ನಾಯಕನಾಗಿದ್ದರು. ಸಮಾಜದಲ್ಲಿ ಉದ್ಭವಿಸುವ ಯಾವುದೇ ಸಮಸ್ಯೆಗಳನ್ನು ಸಂವಾದ ಮತ್ತು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸುವ ವಿಶಿಷ್ಟ ಚಾತುರ್ಯವನ್ನು ಹೊಂದಿದ್ದರು ಎಂದು ಡಾ. ಹೆಗ್ಗಡೆ ಅವರು ತಮ್ಮ ಸಂತಾಪ ಸಂದೇಶದಲ್ಲಿ ಸ್ಮರಿಸಿದ್ದಾರೆ.
ಧರ್ಮಸ್ಥಳದ ನಿಷ್ಠಾವಂತ ಅಭಿಮಾನಿ ಹಾಗೂ ಭಕ್ತರಾಗಿದ್ದ ಅಪ್ಪಣ್ಣ ಹೆಗ್ಡೆಯವರು, ಧರ್ಮಸ್ಥಳದ ವಿವಿಧ ಕಾರ್ಯಕ್ರಮಗಳಿಗೆ ಸದಾ ಸಕ್ರಿಯ ಸಹಕಾರ ನೀಡುತ್ತಿದ್ದರು. ಆ ಭಾಗದಲ್ಲಿ ನಡೆಯುತ್ತಿದ್ದ ಯಾವುದೇ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಗೊಳಿಸುವಲ್ಲಿ ಅವರು ಮುಂಚೂಣಿಯಲ್ಲಿ ನಿಂತು ನೇತೃತ್ವ ವಹಿಸಿದ್ದರು. ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಚಟುವಟಿಕೆಗಳಿಗೆ ಅಪಾರ ಬೆಂಬಲ ನೀಡಿ ಉತ್ತೇಜಿಸಿದ್ದರು ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಹಾಗೂ ಶಾಸಕರಾಗಿ ಅವರು ಸಲ್ಲಿಸಿದ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಅಗಲಿಕೆಯಿಂದ ಸಮಾಜಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಡಾ. ಹೆಗ್ಗಡೆ ಅವರು ಹೇಳಿದರು.
ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಅಗಲುವಿಕೆಯಿಂದ ದುಃಖಿತಗೊಂಡ ಕುಟುಂಬವರ್ಗದವರಿಗೆ, ಊರಿನವರಿಗೆ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ಮತ್ತು ತಾಳ್ಮೆಯನ್ನು ಶ್ರೀ ಮಂಜುನಾಥಸ್ವಾಮಿ ನೀಡಲಿ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಾರ್ಥಿಸಿದ್ದಾರೆ.

