ಕುಣಿಯ (ಕಾಸರಗೋಡು): ಪಾರಂಪರಿಕ ಇಸ್ಲಾಮಿಕ್ ನಂಬಿಕೆಗಳ ಸಂರಕ್ಷಣೆಯನ್ನು ಗುರಿಯಾಗಿಸಿಕೊಂಡು ಕೇರಳದಲ್ಲಿ ಹುಟ್ಟಿ ಜಗತ್ತಿನಾದ್ಯಂತ ವ್ಯಾಪಿಸಿರುವ ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಸಂಸ್ಥೆಯ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾಸಮ್ಮೇಳನವು ಕುಣಿಯದಲ್ಲಿ ಭವ್ಯವಾಗಿ ಸಮಾಪ್ತಿಗೊಂಡಿತು. ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಂದ ಹರಿದು ಬಂದ ಅಪಾರ ಜನಸಾಗರವು ಕುಣಿಯವನ್ನು ಮಾನವ ಸಾಗರವಾಗಿಸಿತು.
ಸಮ್ಮೇಳನ ನಗರಿಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹಾಗೂ ನಾಲ್ಕು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರ ನೇತೃತ್ವದಲ್ಲಿ ಕಠಿಣ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಐದು ದಿನಗಳ ಕಾಲ ನಡೆದ ಶತಮಾನೋತ್ಸವ ಶಿಬಿರವು ವಿವಿಧ ಕಾರ್ಯಯೋಜನೆಗಳು, ನಿರ್ಣಯಗಳು, ಘೋಷಣೆಗಳು ಹಾಗೂ ಅಧ್ಯಯನಾತ್ಮಕ ಉಪನ್ಯಾಸಗಳಿಗೆ ವೇದಿಕೆಯಾಗಿತ್ತು. ವಿಶೇಷವಾಗಿ ಸಿದ್ಧಪಡಿಸಲಾದ ವರಕ್ಕಲ್ ಮುಲ್ಲಕ್ಕೊಯ ತಂಙಲ್ ನಗರಿಯಲ್ಲಿ ಅಂತಿಮ ಮಹಾಸಮ್ಮೇಳನ ನಡೆಯಿತು.
ಸಮಾಪನ ಸಮಾರಂಭಕ್ಕೆ ಸಮಸ್ತ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಸ್ವಾಗತ ಭಾಷಣ ಮಾಡಿದರು. ಈಜಿಪ್ಟ್‌ನ ಅಲ್ ಅಝ್ಹರ್ ವಿಶ್ವವಿದ್ಯಾಲಯದ ರೆಕ್ಟರ್ ಪ್ರೊ. ಡಾ. ಸಲಾಮ ಜುಮಾ ಅಲಿ ದಾವೂದ್ ಉದ್ಘಾಟನೆ ನೆರವೇರಿಸಿದರು. ಸಮಸ್ತ ಅಧ್ಯಕ್ಷ ಸಯ್ಯಿದ್ ಮೊಹಮ್ಮದ್ ಜಿಫ್ರಿ ಮುತ್ತುಕೊಯ ತಂಙಲ್ ಅಧ್ಯಕ್ಷತೆ ವಹಿಸಿದ್ದರು. ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಙಲ್ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್, ಪಿ.ಕೆ. ಕುಞ್ಞಾಲಿಕುಟ್ಟಿ ಸೇರಿದಂತೆ ದೇಶ-ವಿದೇಶಗಳಿಂದ ಆಗಮಿಸಿದ ಅನೇಕ ಗಣ್ಯರು ಮಾತನಾಡಿದರು.
ಸಮಸ್ತ ಶತಮಾನೋತ್ಸವ ಪ್ರಶಸ್ತಿಯನ್ನು ಸಮಸ್ತ ಅಧ್ಯಕ್ಷರು ಲುಲು ಇಂಟರ್‌ನ್ಯಾಷನಲ್ ಗ್ರೂಪ್ ಅಧ್ಯಕ್ಷ ಎಂ.ಎ. ಯೂಸುಫಲಿಗೆ ಪ್ರದಾನ ಮಾಡಿದರು.
ಮಾನವ ಕಲ್ಯಾಣಕ್ಕೆ ದಾರಿ ಮಾಡುವ ಎಲ್ಲ ಜ್ಞಾನವೂ ಪುಣ್ಯಕರ : ಡಾ. ಸಲಾಮ ಜುಮಾ
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಲ್ ಅಝ್ಹರ್ ವಿಶ್ವವಿದ್ಯಾಲಯದ ರೆಕ್ಟರ್ ಡಾ. ಸಲಾಮ ಜುಮಾ ಅಲಿ ದಾವೂದ್, “ಮಾನವೀಯ ಮೌಲ್ಯಗಳು ಮತ್ತು ಮಾನವ ಕಲ್ಯಾಣಕ್ಕೆ ಸಹಕಾರಿಯಾಗುವ ಎಲ್ಲ ಜ್ಞಾನವೂ ಪುಣ್ಯಕರ. ಇಸ್ಲಾಂ ಅನಂತ ಸಂಶೋಧನೆಗೆ ಪ್ರೋತ್ಸಾಹಿಸುವ ಧರ್ಮವಾಗಿದೆ” ಎಂದು ಹೇಳಿದರು.
ಸಮಸ್ತ ಸ್ಥಾಪಿಸಿರುವ ಸಾವಿರಾರು ಮದ್ರಸಗಳು ಮತ್ತು ನೂರಾರು ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಸೃಷ್ಟಿಸಿದ ಕ್ರಾಂತಿ ಅಚ್ಚರಿಯಾಯಕವಾಗಿದೆ ಎಂದು ಅವರು ಪ್ರಶಂಸಿಸಿದರು. ಕೇರಳದ ಪಂಡಿತರಿಗಾಗಿ ಹೆಚ್ಚಿನ ಉನ್ನತ ಅಧ್ಯಯನಕ್ಕೆ ಅಲ್ ಅಝ್ಹರ್ ವಿಶ್ವವಿದ್ಯಾಲಯದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಸಮಸ್ತದ ಶಿಕ್ಷಣ ಕ್ರಾಂತಿ ಅಚ್ಚರಿಯಾಯಕ : ಡಿ.ಕೆ. ಶಿವಕುಮಾರ್
ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, “ಸಮಸ್ತ ಕಳೆದ ನೂರು ವರ್ಷಗಳಲ್ಲಿ ಮದ್ರಸ ಚಳವಳಿ ಹಾಗೂ ವಿವಿಧ ಶಿಕ್ಷಣ ಯೋಜನೆಗಳ ಮೂಲಕ ನಡೆಸಿದ ಸೇವೆ ಅತ್ಯಂತ ಶ್ಲಾಘನೀಯ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಮಸ್ತದ ಮುಂದಿನ ಪ್ರಯಾಣಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದರು.
33,313 ಮಂದಿ ಭಾಗವಹಿಸಿದ ಶತಮಾನೋತ್ಸವ ಶಿಬಿರಕ್ಕೆ ಸಮಾಪ್ತಿ
ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ಅರ್ಹವಾಗುವಂತಹ ಮಹತ್ವದ ಸಾಧನೆಯಾಗಿ 33,313 ಮಂದಿ ಭಾಗವಹಿಸಿದ ಸಮಸ್ತ ಅಧ್ಯಯನ ಶಿಬಿರವು ಯಶಸ್ವಿಯಾಗಿ ಸಮಾಪ್ತಿಗೊಂಡಿತು. ಸಮಸ್ತ ರಾಷ್ಟ್ರೀಯ ಶಿಕ್ಷಣ ಯೋಜನೆಯಾದ ಎಸ್.ಎನ್.ಇ.ಸಿಯ ಧಾರ್ಮಿಕ-ಭೌತಿಕ ಶಿಕ್ಷಣ ಪದವಿದಾನ ಸಮಾರಂಭವೂ ಇದೇ ಸಂದರ್ಭದಲ್ಲಿ ನಡೆಯಿತು.
ವಿದೇಶಸ್ಥರ ಸಮ್ಮಿಲನಕ್ಕೆ ಉತ್ಸಾಹಭರಿತ ಸ್ಪಂದನೆ
‘ಸಮುದ್ರದಾಚೆ ನಮ್ಮ ಧ್ವಜ’ ಎಂಬ ಶೀರ್ಷಿಕೆಯಲ್ಲಿ ನಡೆದ ವಿದೇಶಸ್ಥರ ಸಮ್ಮಿಲನವು ವಿವಿಧ ದೇಶಗಳಿಂದ ಆಗಮಿಸಿದ ಕಾರ್ಯಕರ್ತರಿಂದ ಹೃದಯಂಗಮವಾಯಿತು. ಗಲ್ಫ್ ರಾಷ್ಟ್ರಗಳಿಂದ ನೂರಾರು ಕಾರ್ಯಕರ್ತರು ನೇರವಾಗಿ ಸಮ್ಮೇಳನದಲ್ಲಿ ಭಾಗವಹಿಸಿದರು.
