ಸಿಯಾಟಲ್‌ ಮಹಾನಗರ ವ್ಯಾಪ್ತಿಯ ಬೆಲ್‌ವ್ಯೂನಲ್ಲಿ BANA ‘ದಿಬ್ಬಣ–2026′ : ಉತ್ತರ ಅಮೆರಿಕದ ಬಂಟರ ಸಂಘದ 25ನೇ ರಜತ ಮಹೋತ್ಸವ ಅದ್ಧೂರಿಯಾಗಿ ಸಂಪನ್ನ

0
22

ಬೆಲ್‌ವ್ಯೂ (ಸಿಯಾಟಲ್ ಮಹಾನಗರ ಪ್ರದೇಶ), ವಾಷಿಂಗ್ಟನ್ : ಉತ್ತರ ಅಮೆರಿಕದ ಬಂಟರ ಸಂಘ (Bunts Association of North America – BANA) ಆಯೋಜಿಸಿದ್ದ ‘ದಿಬ್ಬಣ–2026’ 25ನೇ ರಜತ ಮಹೋತ್ಸವ ಮಹಾಸಮ್ಮೇಳನ ಜುಲೈ 30ರಿಂದ ಆಗಸ್ಟ್ 2ರವರೆಗೆ ವಾಷಿಂಗ್ಟನ್ ರಾಜ್ಯದ ಬೆಲ್‌ವ್ಯೂ ನಗರದ ಹಯಾತ್ ರೀಜೆನ್ಸಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನೆರವೇರಿತು.

ಉತ್ತರ ಅಮೆರಿಕದ ಬಂಟರ ಸಂಘದ 25ನೇ ಅಧ್ಯಕ್ಷರಾದ ಗುಳ್ಳಾಡಿ ಮಂಜುನಾಥ್ ಆರ್. ಶೆಟ್ಟಿ (ಸ್ನೋಕ್ವಾಲ್ಮಿ, ವಾಷಿಂಗ್ಟನ್) ಅವರ ಸಮರ್ಥ ನಾಯಕತ್ವ, ದೂರದೃಷ್ಟಿಯ ಯೋಜನೆ, ಕಾರ್ಯಕಾರಿ ಸಮಿತಿ, ಸಂಘಟನಾ ಸಮಿತಿ ಹಾಗೂ ನೂರಾರು ಸ್ವಯಂಸೇವಕರ ಸಮರ್ಪಿತ ಸೇವೆಯಿಂದ ಆಯೋಜಿಸಲಾದ ಈ ಐತಿಹಾಸಿಕ ಮಹಾಸಮ್ಮೇಳನವು ಸಂಘದ 47 ವರ್ಷಗಳ ಸಾರ್ಥಕ ಪಯಣದ ಹೆಮ್ಮೆಯ ಮೈಲಿಗಲ್ಲಾಗಿ ಮೂಡಿಬಂತು.ಸಂಸ್ಕೃತಿ, ಪರಂಪರೆ,ನಾಯಕತ್ವ, ಸಮಾಜಸೇವೆ ಮತ್ತು ಜಾಗತಿಕ ಬಂಟ ಬಾಂಧವ್ಯವನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸಿದ ಈ ಮಹೋತ್ಸವವು ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಂಟ ಸಮುದಾಯವನ್ನು ಮತ್ತಷ್ಟು ಸಶಕ್ತವಾಗಿ ಬೆಸೆದಿತು.

ಯುನೈಟೆಡ್ ಸ್ಟೇಟ್ಸ್, ಕೆನಡಾ,ಭಾರತ,ಆಸ್ಟ್ರೇಲಿಯಾ,ಯುನೈಟೆಡ್ ಅರಬ್ ಎಮಿರೇಟ್ಸ್ (ದುಬೈ),ಇಂಡೋನೇಷ್ಯಾ, ಕಾಂಬೋಡಿಯಾ ಹಾಗೂ ಓಮನ್ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ 600ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಅತಿಥಿಗಳು, ಈ ಮಹಾಸಮ್ಮೇಳನದಲ್ಲಿ ಭಾಗವಹಿಸಿದರು. ವಿಶೇಷವಾಗಿ,ಸುಮಾರು 30% ಯುವಜನರ ಸಕ್ರಿಯ ಭಾಗವಹಿಸುವಿಕೆ ಸಮಾವೇಶದ ಪ್ರಮುಖ ಆಕರ್ಷಣೆಯಾಗಿದ್ದು, ಮುಂದಿನ ಪೀಳಿಗೆಯ ನಾಯಕತ್ವ ಹಾಗೂ ಸಮುದಾಯದ ಭವಿಷ್ಯದ ಬಗ್ಗೆ ಆಶಾವಾದ ಮೂಡಿಸಿತು.

ಮಹಾಸಮ್ಮೇಳನದ ಉದ್ಘಾಟನಾ ಸಮಾರಂಭವು ಸಾಂಪ್ರದಾಯಿಕ ಪೂರ್ಣಕುಂಭ (ಕಲಶ) ಸ್ವಾಗತದೊಂದಿಗೆ ಆರಂಭವಾಯಿತು. ಸಾಂಪ್ರದಾಯಿಕ ಉಡುಗೆಯಲ್ಲಿ ಸಿಂಗರಿಸಿಕೊಂಡಿದ್ದ ಮಹಿಳೆಯರು ಪೂರ್ಣಕುಂಭ ಹಿಡಿದು ಗಣ್ಯ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೈದಿಕ ಸ್ವಾಗತವು ಭಾರತೀಯ ಸಂಸ್ಕೃತಿ, ಆತಿಥ್ಯ ಮತ್ತು ಬಂಟ ಸಮುದಾಯದ ಪರಂಪರೆಯನ್ನು ಪ್ರತಿಬಿಂಬಿಸಿ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.

ಸಮಾವೇಶದ ಮುಖ್ಯ ಅತಿಥಿಯಾಗಿ ಭಾರತದ ರಾಯಭಾರಿ ಕಚೇರಿ, ಸಿಯಾಟಲ್‌ನ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಭಾಗವಹಿಸಿ, “ವಿದೇಶದಲ್ಲಿ ಭಾರತೀಯ ಸಂಸ್ಕೃತಿ, ಭಾಷೆ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಉತ್ತರ ಅಮೆರಿಕದ ಬಂಟರ ಸಂಘ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

ಸಮಾವೇಶದಲ್ಲಿ ಮಹಾದಾನಿ ಹಾಗೂ ಹೆರಂಬ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ ಫಾರ್ಚೂನ್ ಗ್ರೂಪ್ ಹೋಟೆಲ್ಸ್ (ಯುಎಇ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಯುಎಇ ಬಂಟ್ಸ್ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ,ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜಶ್ರೀ ಕೆ. ವಾಸುದೇವ ಶೆಟ್ಟಿ,ಬಂಟ್ಸ್ ಸಂಘ ಮುಂಬೈ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಇಂಡೋನೇಷ್ಯಾದ ಪಿ.ಟಿ. ರತ್ನ ಫಾರೆವರ್ ಹಾಸ್ಪಿಟಾಲಿಟಿಯ ಅಧ್ಯಕ್ಷ ನಿರ್ದೇಶಕ ಸುಧಾರಾಮನ್ ಶೆಟ್ಟಿ,ಆಸ್ಟ್ರೇಲಿಯಾದ ಒಮೆಗಾ ಪೇಂಟ್ಸ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬರ್ಗರ್ ಪೇಂಟ್ಸ್ ಸಿಂಗಾಪುರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಕೆ.ಶಿವರಾಮ ಶೆಟ್ಟಿ,ಇಸ್ಸಾರ್ ಫೈನಾನ್ಷಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಂಬೈ ಬಂಟ್ಸ್ ಸಂಘದ ಗೌರವ ಕಾರ್ಯದರ್ಶಿ ಡಾ ಆರ್.ಕೆ. ಶೆಟ್ಟಿ,ಸ್ವಾತಿ ಗ್ರೂಪ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕರ್ನಾಟಕ ರಾಜ್ಯ ಹೋಟೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ,ಹೀಟ್ ಶೀಲ್ಡ್ ವ್ಯವಸ್ಥಾಪಕ ನಿರ್ದೇಶಕರು,ಯುಎಇ ಬಂಟ್ಸ್ ಉಪಾಧ್ಯಕ್ಷರು ಹಾಗೂ ಐಬಿಸಿಸಿಐ ಗಲ್ಫ್ ಚಾಪ್ಟರ್‌ನ ಪದಾಧಿಕಾರಿ ಪ್ರೇಮನಾಥ್ ಶೆಟ್ಟಿ, ಅಮೆರಿಕದ ಕನ್ನಡ ಕೂಟಗಳ ಒಕ್ಕೂಟ (AKKA) ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಅಮರನಾಥ ಗೌಡ, ಆಲ್ ಅಮೆರಿಕಾ ತುಳು ಅಸೋಸಿಯೇಷನ್ (AATA) ಅಧ್ಯಕ್ಷೆ ಶ್ರೀವಳ್ಳಿ ರೈ ಮಾರ್ಟೆಲ್ ಹಾಗೂ AATA ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್,ಉತ್ತರ ಅಮೆರಿಕ ವಿಶ್ವ ಕನ್ನಡ ಸಂಘ (NAVIKA) ಅಧ್ಯಕ್ಷೆ ಡಾ. ಅನ್ನಪೂರ್ಣ ಭಟ್,ಆಸ್ಟ್ರೇಲಿಯಾದ ಉದ್ಯಮಿ ಹಾಗೂ ಆಸ್ಟ್ರೇಲಿಯಾ ಬಂಟ್ಸ್ ಸಮುದಾಯದ ಮುಖಂಡ ದಯಾನಂದ ಶೆಟ್ಟಿ ಮತ್ತು ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿಯ ರಾಜಕಾರಣಿ ಶಿಲ್ಪಾ ಹೆಗ್ಡೆ, ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ (ಮುಂಬೈ) ಅಧ್ಯಕ್ಷ ಉದ್ಯಮಿ ಬೆಳ್ಳಾಡಿ ಅಶೋಕ್ ಶೆಟ್ಟಿ,ಮಾಲ್ವನ್ ತಡ್ಕಾ ಸಂಸ್ಥಾಪಕ ಹಾಲಾಡಿ ಆದರ್ಶ್ ಶೆಟ್ಟಿ, ಹಾಗೂ ಸೀತಾರಾಮ ಶೆಟ್ಟಿ ತೊಂಬತ್ತು ಸೇರಿದಂತೆ ಸಮಾಜದ ಹಿರಿಯರು,ವೈದ್ಯರು,ಶಿಕ್ಷಣತಜ್ಞರು,ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು ಸಮಾವೇಶದ ಗೌರವವನ್ನು ಹೆಚ್ಚಿಸಿದರು.ಗೌರವ ಕಾನ್ಸುಲ್ ಸುರೇಶ್ ಕುಮಾರ್ ಶರ್ಮಾ,ಉತ್ತರ ಅಮೆರಿಕದ ಬಂಟರ ಸಂಘದ ಮುಂದಿನ ಅಧ್ಯಕ್ಷರು ಹಾಗೂ ಟ್ರೈ-ಸ್ಟೇಟ್ ರೀಜನ್ (ನ್ಯೂಯಾರ್ಕ್) ಪ್ರತಿನಿಧಿಯಾದ ಸುರೇಶ್ ಶೆಟ್ಟಿ, ಬೆಲ್‌ವ್ಯೂ ನಗರದ ಉಪ ಮೇಯರ್ ಡೇವ್ ಹ್ಯಾಮಿಲ್ಟನ್ ಹಾಗೂ ವಾಷಿಂಗ್ಟನ್ ರಾಜ್ಯ ಸೆನೆಟರ್ ಮಂಕಾ ಧಿಂಗ್ರಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಸಮಾವೇಶದ ಗೌರವವನ್ನು ಹೆಚ್ಚಿಸಿದರು.

ರಜತ ಮಹೋತ್ಸವದ ಅಂಗವಾಗಿ ಸಂಘದ ಬೆಳವಣಿಗೆಗೆ ಅಡಿಪಾಯ ಹಾಕಿದ ಸ್ಥಾಪಕ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಾಯಕರನ್ನು “BANA Circle of Honor” ಮೂಲಕ ವಿಶೇಷವಾಗಿ ಗೌರವಿಸಲಾಯಿತು.ಶಂಕರ್ ಶೆಟ್ಟಿ, ಡಾ. ರವಿ ಶೆಟ್ಟಿ, ಡಾ. ದಿನಕರ ರೈ,ಕೊಳ್ಕೆಬೈಲು ಮಹಾಬಲ ಶೆಟ್ಟಿ ಹಾಗೂ ಡಾ.ಕೆ.ನಾರಾಯಣ ಶೆಟ್ಟಿ ಸೇರಿದಂತೆ ಹಲವಾರು ಹಿರಿಯರ ಸೇವೆಯನ್ನು ಸ್ಮರಿಸಿ ಕೃತಜ್ಞ ನಮನ ಸಲ್ಲಿಸಲಾಯಿತು.

ದೂರದೃಷ್ಟಿಯ ನಾಯಕತ್ವಕ್ಕಾಗಿ ಮುಲ್ಕಿ ಸುಂದರ್ ರಾಮ ಶೆಟ್ಟಿಯವರಿಗೆ ಮರಣೋತ್ತರವಾಗಿ ‘ಬಂಟ್ಸ್ ಸರ್ಕಲ್ ಆಫ್ ಹಾನರ್’ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.ಈ ಪ್ರಶಸ್ತಿಯನ್ನು ಅವರ ಕಿರಿಯ ಪುತ್ರಿ ಊರ್ಮಿಳಾ ಶೆಟ್ಟಿಯವರು ಸ್ವೀಕರಿಸಿದರು. ಸಮಾಜಸೇವೆ,ದಾನಶೀಲತೆ ಹಾಗೂ ಸಮುದಾಯದ ಮೇಲಿನ ವಿಶಿಷ್ಟ ಪ್ರಭಾವವನ್ನು ಗುರುತಿಸಿ “BANA Distinguished Impact Award” ಅನ್ನು ಡಾ. ಶಾಂತರಾಮ ಶೆಟ್ಟಿ ಹಾಗೂ ಶೇಖರ್ ನಾಯಕ್ ಎಂ ರಿಸಲ್ಟ್ಸ್ ಸಂಸ್ಥಾಪಕರು ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.

ಬಂಟ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಉತ್ತರ ಅಮೆರಿಕದ ಬಂಟರ ಸಂಘದ ಅಧ್ಯಕ್ಷ ಗುಳ್ಳಾಡಿ ಮಂಜುನಾಥ್ ಆರ್. ಶೆಟ್ಟಿ ಹಾಗೂ ಅವರ ಪತ್ನಿ ಪವಿತ್ರಾ ಶೆಟ್ಟಿಯವರನ್ನು ಸನ್ಮಾನಿಸಿ ಅಭಿನಂದಿಸಿದರು. ಮೂರು ದಿನಗಳ ಸಮಾವೇಶದಲ್ಲಿ ಕ್ರೀಡಾಕೂಟಗಳು,ತಂತ್ರಜ್ಞಾನ ಅಧಿವೇಶನಗಳು,ಉದ್ಯಮಿಗಳ ಸಮಾವೇಶ,ಯುವಜನ ಮತ್ತು ಮಹಿಳಾ ವೇದಿಕೆ,ಮಕ್ಕಳ ಪ್ರತಿಭಾ ಪ್ರದರ್ಶನಗಳು,ಸಾಹಿತ್ಯ ಕಾರ್ಯಕ್ರಮಗಳು,ಸಮಾಜಸೇವಾ ಚಟುವಟಿಕೆಗಳು,ಜಾನಪದ ನೃತ್ಯ,ಸಂಗೀತ,ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕರಾವಳಿ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಅನಾವರಣಗೊಳಿಸಿದ ವಿಶೇಷ ಪ್ರದರ್ಶನಗಳು ಅಪಾರ ಮೆಚ್ಚುಗೆಗೆ ಪಾತ್ರವಾದವು.

ಕರಾವಳಿಯ ಸವಿರುಚಿಯೂ ‘ದಿಬ್ಬಣ–2026’ರ ವಿಶೇಷ ಆಕರ್ಷಣೆಯಾಗಿತ್ತು. ಕೋಳಿ ಗಸಿ,ಕೋಳಿ ರೊಟ್ಟಿ, ಘೀ ರೋಸ್ಟ್,ರಾಗಿ ಮಣ್ಣಿ ಸೇರಿದಂತೆ ತುಳುನಾಡಿನ ವೈವಿಧ್ಯಮಯ ಸಾಂಪ್ರದಾಯಿಕ ಖಾದ್ಯಗಳು ಅತಿಥಿಗಳ ಮೆಚ್ಚುಗೆಗೆ ಪಾತ್ರವಾದವು.

2025–26ನೇ ಸಾಲಿನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಗುಳ್ಳಾಡಿ ಮಂಜುನಾಥ್ ಆರ್. ಶೆಟ್ಟಿ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಸೀಮಾ ಶೆಟ್ಟಿ ಹಾಗೂ ಹಿತೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಮಿತಾ ಶೆಟ್ಟಿ,ಖಜಾಂಚಿ ಆದ್ಯಾ ಕುಮಾರ್, ಯುವ ಕಾರ್ಯನಿರ್ವಾಹಕ ನಿರ್ದೇಶಕ ವಿಜೇತ್ ಶೆಟ್ಟಿ ಹಾಗೂ ‘One Team Seattle’ ತಂಡದ ಸದಸ್ಯರು ಸಮನ್ವಯದಿಂದ ಕಾರ್ಯನಿರ್ವಹಿಸಿ ‘ದಿಬ್ಬಣ–2026’ ಮಹಾಸಮ್ಮೇಳನದ ಅಭೂತಪೂರ್ವ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಅಧಿಕಾರ ಹಸ್ತಾಂತರ (Presidential Handover Ceremony) ನೆರವೇರಿತು. 2025–2026ರ ಅಧ್ಯಕ್ಷರಾದ ಗುಳ್ಳಾಡಿ ಮಂಜುನಾಥ್ ಆರ್. ಶೆಟ್ಟಿ ಅವರು ಅಧ್ಯಕ್ಷೀಯ ಅಧಿಕಾರವನ್ನು 2027–2028ರ ಅವಧಿಗೆ ಉತ್ತರ ಅಮೆರಿಕದ ಬಂಟರ ಸಂಘದ ಮುಂದಿನ ಅಧ್ಯಕ್ಷರು ಹಾಗೂ ಟ್ರೈ-ಸ್ಟೇಟ್ ರೀಜನ್ (ನ್ಯೂಯಾರ್ಕ್) ಪ್ರತಿನಿಧಿಯಾದ ಸುರೇಶ್ ಶೆಟ್ಟಿ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ, ಅವರ ಮುಂದಿನ ಅವಧಿಗೆ ಶುಭ ಹಾರೈಸಲಾಯಿತು.

ರಜತ ಮಹೋತ್ಸವದ ಯಶಸ್ಸಿನ ಹಿಂದೆ ಅಧ್ಯಕ್ಷರಾದ ಗುಳ್ಳಾಡಿ ಮಂಜುನಾಥ್ ಆರ್. ಶೆಟ್ಟಿ ಅವರ ದೂರದೃಷ್ಟಿಯ ನಾಯಕತ್ವ, ಸಮರ್ಥ ಸಂಘಟನಾ ಕೌಶಲ್ಯ ಹಾಗೂ ಸಮುದಾಯವನ್ನು ಒಗ್ಗೂಡಿಸುವ ದೃಷ್ಟಿಕೋನ ಪ್ರಮುಖ ಪಾತ್ರ ವಹಿಸಿತು. ಅವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ, ಸಂಘಟನಾ ಸಮಿತಿ, ಪ್ರಾಯೋಜಕರು, ದಾನಿಗಳು ಹಾಗೂ ನೂರಾರು ಸ್ವಯಂಸೇವಕರು ಸಮನ್ವಯದಿಂದ ಕಾರ್ಯನಿರ್ವಹಿಸಿ ‘ದಿಬ್ಬಣ–2026’ ಅನ್ನು ಉತ್ತರ ಅಮೆರಿಕದ ಬಂಟರ ಸಂಘದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಗೂ ಸ್ಮರಣೀಯ ರಜತ ಮಹೋತ್ಸವ ಸಮಾವೇಶಗಳಲ್ಲಿ ಒಂದಾಗಿ ರೂಪಿಸಿದರು.

ಸಮಾವೇಶದ ಮತ್ತೊಂದು ವಿಶೇಷ ಆಕರ್ಷಣೆಯಾಗಿ BuntsMatch ಎಂಬ ಬಂಟ ಸಮುದಾಯದ ಜಾಗತಿಕ ವೈವಾಹಿಕ ವೇದಿಕೆಯನ್ನು ಪರಿಚಯಿಸಲಾಯಿತು. ವಿಶ್ವದಾದ್ಯಂತ ನೆಲೆಸಿರುವ ಬಂಟ ಯುವಜನರನ್ನು ಸಂಪರ್ಕಿಸುವ ಉದ್ದೇಶದಿಂದ ರೂಪುಗೊಂಡಿರುವ ಈ ಡಿಜಿಟಲ್ ವೇದಿಕೆ ಉತ್ತಮ ಸ್ಪಂದನೆ ಪಡೆಯಿತು.
47 ವರ್ಷಗಳ ಪರಂಪರೆಯನ್ನು ಹೆಮ್ಮೆಯಿಂದ ಮುಂದುವರಿಸುತ್ತಿರುವ ಉತ್ತರ ಅಮೆರಿಕದ ಬಂಟರ ಸಂಘದ 25ನೇ ರಜತ ಮಹೋತ್ಸವ ‘ದಿಬ್ಬಣ–2026’ ಬಂಟ ಸಮುದಾಯದ ಏಕತೆ,ಸಂಸ್ಕೃತಿ,ಪರಂಪರೆ, ಸೇವಾ ಮನೋಭಾವ ಹಾಗೂ ಜಾಗತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ ಐತಿಹಾಸಿಕ ಸಮಾವೇಶವಾಗಿ ಗುರುತಿಸಿಕೊಂಡು,BANA ಇತಿಹಾಸದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ನಿರ್ಮಿಸಿದೆ.ವಿಶ್ವದಾದ್ಯಂತ ನೆಲೆಸಿರುವ ಬಂಟ ಸಮುದಾಯದ ಐಕ್ಯತೆ, ಪರಸ್ಪರ ಸಹಕಾರ ಹಾಗೂ ಮುಂದಿನ ಪೀಳಿಗೆಗೆ ಸಂಸ್ಕೃತಿ ಮತ್ತು ಪರಂಪರೆಯನ್ನು ತಲುಪಿಸುವ ಸಂಕಲ್ಪವನ್ನು ಈ ಮಹಾಸಮ್ಮೇಳನ ಮತ್ತಷ್ಟು ಬಲಪಡಿಸಿತು.