ಅಬಕಾರಿ ಸಚಿವರ ರಾಜೀನಾಮೆಗೆ ಬಿಜೆಪಿ ಆಗ್ರಹ

0
15

ಉಡುಪಿ: ರಾಜ್ಯದ ಕಾಂಗ್ರೆಸ್​ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, 6 ಸಾವಿರ ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವ ಆರ್​.ಬಿ. ತಿಮ್ಮಾಪುರ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್​ ಸದಸ್ಯ ಪ್ರತಾಪ್​ ಸಿಂಹ ನಾಯಕ್​ ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ಮತ್ತು ಪರವಾನಗಿ ನವೀಕರಣಕ್ಕಾಗಿ ಲಂಚಕ್ಕೆ ಬೇಡಿಕೆಯಿಡಲಾಗುತ್ತಿದೆ ಎಂದು ಸ್ವತ@ ಮದ್ಯ ಮಾರಾಟಗಾರರ ಸಂಘವೇ ಆರೋಪಿಸಿದೆ. ಇಷ್ಟೆಲ್ಲಾ ಗಂಭೀರ ಆರೋಪಗಳು ಕೇಳಿಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕರ್ನಾಟಕ ಸರ್ಕಾರ ಕಾಂಗ್ರೆಸ್​ ಹೈಕಮಾಂಡ್​ಗೆ ಎಟಿಎಂ ಆಗಿ ಪರಿವರ್ತನೆಯಾಗಿದೆ. ಜನರ ದುಡ್ಡು ಪೋಲಾಗುತ್ತಿದೆ. ಅಭಿವೃದ್ಧಿ ಸ್ಥಗಿತಕೊಂಡಿದೆ ಎಂದು ಅವರು ಕಿಡಿಕಾರಿದರು.

ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡಲು ಹಿಂದೇಟು ಹಾಕುತ್ತಿರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಜನರ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶವಿಲ್ಲದೆ ಅಧಿವೇಶನ ಮುಗಿದಿದೆ. ಹೀಗಾಗಿ ಜನತಾ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದರು.

ಹತಾಶ ಕಾಂಗ್ರೆಸ್​
ಸತತ ಚುನಾವಣಾ ಸೋಲಿನಿಂದ ಕಾಂಗ್ರೆಸ್​ ನಾಯಕರು ಹತಾಶರಾಗಿದ್ದಾರೆ. ಎನ್​ ಡಿಎ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ವಿರೋಧಿಸುವ ಮನೋಭಾವ ಬೆಳೆಸಿಕೊಂಡಿದ್ದಾರೆ. ಲೋಕಸಭೆಯಲ್ಲಿ ಪ್ರಧಾನಿ ಮೇಲೆ ಆಕ್ರಮಣಕ್ಕೆ ಸಿದ್ಧತೆ ನಡೆದಿತ್ತು ಎಂಬ ಸ್ಪೀಕರ್​ ಹೇಳಿಕೆ ಆತಂಕಕಾರಿಯಾಗಿದೆ. ಕಳೆದ 20 ವರ್ಷದಲ್ಲಿ ನರೇಗಾ ಯೋಜನೆಯಲ್ಲಿ ಹಳ್ಳಿಗಳಿಗೆ 10 ಲಕ್ಷ ಕೋಟಿ ರೂ. ವ್ಯಯಿಸಲಾಗಿದೆ. ಆದರೆ ನಿರೀತ ಪ್ರಗತಿ ಸಾಧ್ಯವಾಗಿಲ್ಲ. ಹಣ ದುರುಪಯೋಗ ತಡೆಗಾಗಿ ವಿಜಿ ರಾಮ್​ ಜಿ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​, ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಾಪು, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಮತ್ತು ಶಿವಕುಮಾರ್​ ಅಂಬಲಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here