ಸಾಲ ನೀಡುವ ನೆಪದಲ್ಲಿ ಬಡ್ಡಿ ದಂಧೆಗೆ ದೂಡಿ ದಲಿತ ಯುವತಿಗೆ ಕಿರುಕುಳ; ಮಣಿಪಾಲ ಸೌಹಾರ್ದ ಸೊಸೈಟಿ ಮುಖ್ಯಸ್ಥನ ವಿರುದ್ಧ ಆರೋಪ

0
16

ಉಡುಪಿ : ಸಾಲ ಕೇಳಲು ಬಂದ ದಲಿತ ಯುವತಿಗೆ ಸಾಲ ನೀಡುವ ನೆಪದಲ್ಲಿ ಬಡ್ಡಿ ದಂಧೆಗೆ ದೂಡಿ, ಬಳಿಕ ವ್ಯವಹಾರದಲ್ಲಿ ಸಹಕರಿಸದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಮಣಿಪಾಲ ಸೌಹಾರ್ದ ಸೊಸೈಟಿಯ ಮುಖ್ಯಸ್ಥ ಸಂದೀಪ್ ಕೃಷ್ಣ ಪೂಜಾರಿ ಬೆದರಿಕೆಯೊಡ್ಡಿದ್ದಾರೆ ಎಂದು ಸಂತ್ರಸ್ತೆ ಸುಲೋಚನಾ ಅಳಲು ತೋಡಿಕೊಂಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೇಜಾರು ನಿವಾಸಿ ಸುಲೋಚನಾ, ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತಂದೆ ಹಾಗೂ ನಿಧನರಾದ ಅಕ್ಕನ ಇಬ್ಬರು ಮಕ್ಕಳನ್ನು ಸಾಕುವ ಜವಾಬ್ದಾರಿ ತನ್ನ ಮೇಲಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಮನೆ ರಿಪೇರಿಗೆಂದು ಉಡುಪಿಯ ಮೀನು ಮಾರುಕಟ್ಟೆ ಬಳಿ ಇರುವ ಮಣಿಪಾಲ ಸೌಹಾರ್ಧ ಸೊಸೈಟಿಯಲ್ಲಿ ಸಾಲ ಪಡೆಯಲು ತೆರಳಿದಾಗ, ಸೊಸೈಟಿಯ ಮುಖ್ಯಸ್ಥ ಸಂದೀಪ್ ಕೃಷ್ಣ ಪೂಜಾರಿ ಸಾಲ ನೀಡಬೇಕಾದರೆ ಬಡ್ಡಿ ವ್ಯವಹಾರದಲ್ಲಿ ತನಗೆ ಸಹಕರಿಸುವಂತೆ ತಿಳಿಸಿದ್ದರು.

ಅದರಂತೆ ಒಂದು ಲಕ್ಷ ಸಾಲವನ್ನು ನೀಡಿದ್ದರು. ಉಳಿದಂತೆ ಯುವತಿಯ ಖಾತೆಗೆ 5 ಲಕ್ಷ ಹಣವನ್ನು ಜಮಾ ಮಾಡಿ ಅದನ್ನು ಬಡ್ಡಿ ವ್ಯವಹಾರ ಮಾಡಿ ಕೊಡುವಂತೆ ತಿಳಿಸಿದ್ದರು ಎಂದು ಯುವತಿ ಸುಲೋಚನಾ ವಿವರಿಸಿದ್ದಾರೆ.

ಸುಲೋಚನಾ ಅವರು 9.50 ಲಕ್ಷ ಹಣವನ್ನು ಸಂದೀಪ್ ಕೃಷ್ಣ ಪೂಜಾರಿ ಅವರಿಗೆ ಮರು ಪಾವತಿ ಮಾಡಿ, ತಾನಿನ್ನು ವ್ಯವಹಾರ ನಡೆಸುವುದಿಲ್ಲ ಎಂದಿದ್ದರು. ಆದರೆ ಇದಕ್ಕೆ ಒಪ್ಪದ ಸಂದೀಪ್, ಬಡ್ಡಿ ವ್ಯವಹಾರದಲ್ಲಿ ತೊಡಗಿಸಿಕೊಳ್ಳದೇ ಇದ್ದಲ್ಲಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ. ಅಲ್ಲದೇ ಫೆ. 6ರಂದು ತನ್ನ ಮನೆಗೆ ಬಂದು ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆಯೊಡ್ಡಿದ್ದಾರೆ. ತನ್ನ ಮೇಲೆ ಜಾತಿ ನಿಂದನೆ ಮಾಡಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.

ಈ ಬಗ್ಗೆ ಈಗಾಗಲೇ ಮಲ್ಪೆ ಠಾಣೆಗೆ ದೂರು ನೀಡಿರುವುದಾಗಿ ಯುವತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here