ಬೆಳ್ತಂಗಡಿ ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ..! ಸ್ವಯಂ ಕೈ ಗೀರಿಕೊಂಡು ಕಥೆ ಕಟ್ಟಿದ ವಿದ್ಯಾರ್ಥಿನಿ

0
151

ಬೆಳ್ತಂಗಡಿ : ಭಾರೀ ಕುತೂಹಲ ಹಾಗೂ ಸಂಚಲನ ಮೂಡಿಸಿದ್ದ ಬೆಳ್ತಂಗಡಿಯ ಪಿಯುಸಿ ವಿದ್ಯಾರ್ಥಿನಿಯ ಅಪಹರಣ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಈ ಅಪಹರಣ ಎನ್ನುವುದು ವಿದ್ಯಾರ್ಥಿನಿಯೇ ಕಟ್ಟಿದ ಕಟ್ಟು ಕಥೆ ಎಂಬುದಾಗಿ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದಾರೆಂದು ವರದಿಯಾಗಿದೆ.

ಕಾಶಿಬೆಟ್ಟು ಸರಕಾರಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಸ್ಕೂಟ‌ರ್ ತಡೆದು ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳು ಸುದೆಮುಗೇರು ಎಂಬಲ್ಲಿ ಅಪಹರಿಸಲು ಯತ್ನಿಸಿದ್ದಾರೆ, ಈ ವೇಳೆ ತನ್ನ ಕೈಗೆ ಚೂರಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಬಾಲಕಿ ಹೇಳಿದ್ದಳು. ಬಳಿಕ ಆಕೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಭಾರೀ ಸಂಚಲನ ಮೂಡಿಸಿದ್ದರಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಪೊಲೀಸರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು.

ಮಂಗಳೂರಿನಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ದೌಡಾಯಿಸಿದ್ದರು. ಅಪಹರಣ ಪ್ರಕರಣ ದಾಖಲಾದ ಬಳಿಕ ಪೊಲೀಸರ ತಂಡ ತನಿಖೆ ಕೈಗೊಂಡು ಇಡೀ ದಿನ ಕಾರ್ಯಾಚರಣೆ ನಡೆಸಿತ್ತು, ಸುತ್ತ ಮುತ್ತಲ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು , ಪೊಲೀಸರಿಗೆ ಸಾಂದರ್ಭಿಕ ಸಾಕ್ಷ್ಯಗಳು ಸಿಗದೇ ಇದ್ದಾಗ ಹೆಚ್ಚುವರಿ ಮಾಹಿತಿ ಪಡೆಯಲು ವಿಧ್ಯಾರ್ಥಿನಿಯನ್ನೇ ವಿಚಾರಣೆಗೆ ಒಳಪಡಿಸಿದ್ದರು ಆಗ ಆಕೆ ನೈಜ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆಂದು ತಿಳಿದು ಬಂದಿದೆ.

ಮಂಗಳೂರಿನ ಕಾಲೇಜು ಸೇರಬೇಕೆಂಬ ಇಚ್ಛೆಯನ್ನು ಹೊಂದಿದ್ದ ಆಕೆ ಅಪಹರಣದ ಕತೆ ಕಟ್ಟಿದ್ದಾಗಿ ತಿಳಿಸಿದ್ದಾಳೆ ಎಂದು ಗೊತ್ತಾಗಿದೆ. ಗ್ರಾಮೀಣ ಭಾಗದ ಕಾಲೇಜು ಬದಲು ಮಂಗಳೂರು ನಗರದ ಕಾಲೇಜಿಗೆ ಹೋಗಲು ಬಯಸಿದ್ದು, ಅದಕ್ಕಾಗಿ ಸ್ಕೂಟಿಯನ್ನು ನಿಲ್ಲಿಸಿ ತಾನೇ ಬ್ಲಡ್ ನಿಂದ ಕೈಯನ್ನು ಕೊಯ್ದುಕೊಂಡಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆಂದು ವರದಿಯಾಗಿದೆ. ಮಾತ್ರವಲ್ಲದೆ, ತನ್ನ ಮನೆಯ ಸಮೀಪವೇ ಪುಸ್ತಕಗಳನ್ನು ಸುಟ್ಟು ಹಾಕಿದ್ದಳು. ಬಳಿಕ ತನ್ನ ಬ್ಯಾಗನ್ನು ಅಪಹರಣಕ್ಕೆ ಬಂದಿದ್ದವರು ಹೊತ್ತೊಯ್ದಿದ್ದಾರೆ ಎಂದು ಕಟ್ಟು ಕತೆ ಸೃಷ್ಟಿಸಿದ್ದಳು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here