ನವದೆಹಲಿ : ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ದೇಶಾದ್ಯಂತ ಕನಿಷ್ಠ 30 ಕೋಟಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ತಿಳಿಸಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಕಾರ್ಪೊರೇಟ್ ಪರ ನೀತಿಗಳಿಗೆ ಪ್ರತಿರೋಧ” ಪ್ರದರ್ಶಿಸಲು ಒಕ್ಕೂಟಗಳ ಗುಂಪು ಜನವರಿ 9, 2025 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು.
ಈ ಬಾರಿ “ಫೆಬ್ರವರಿ 12 (ಗುರುವಾರ) ರಂದು ಕರೆ ನೀಡಿದ್ದ ಮುಷ್ಕರದಲ್ಲಿ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ” ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಸುದ್ದಿಗಾರರಿಗೆ ತಿಳಿಸಿದರು. ಕೊನೆಯ ಬಾರಿಗೆ ಜುಲೈ 9, 2025 ರಂದು ಸುಮಾರು 25 ಕೋಟಿ ಕಾರ್ಮಿಕರು ಆಂದೋಲನದಲ್ಲಿ ಭಾಗವಹಿಸಿದ್ದರು.
ಫೆಬ್ರವರಿ 12 ರಂದು ದೇಶಾದ್ಯಂತ ಬಂದ್ ನಡೆಸುವುದಾಗಿ ಆಲ್ ಇಂಡಿಯಾ ಕಿಸಾನ್ ಸಭಾ (AIKS) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (SKM) ಕರೆ ನೀಡಿವೆ. ಈ ಕುರಿತು ಮಾತನಾಡಿದ ಕಿಸಾನ್ ಸಭಾ ನಾಯಕ ಕೃಷ್ಣ ಪ್ರಸಾದ್, ಅಮೆರಿಕ-ಭಾರತ ವ್ಯಾಪಾರ ಒಪ್ಪಂದದಿಂದ ರೈತರ ಜೊತೆಗೆ ಹೈನುಗಾರಿಕೆ ಮಾಡುವ ರೈತರಿಗೂ ತೀವ್ರ ನಷ್ಟವಾಗಲಿದೆ. ಒಣಗಿದ ಡಿಸ್ಟಿಲರ್ ಧಾನ್ಯಗಳು (DDGS), ಪಶುಗ್ರಾಹಕ್ಕಾಗಿ ಕೆಂಪು ಜೋಳ ಮತ್ತು ಸೋಯಾಬೀನ್ ಎಣ್ಣೆಯಂತಹ ವಸ್ತುಗಳಿಗೆ ಭಾರತದ ಮಾರುಕಟ್ಟೆಯನ್ನು ಮುಕ್ತಗೊಳಿಸುವುದರಿಂದ ಕೃಷಿ ಮತ್ತು ಡೈರಿ ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಜೊತೆಗಿನ ಭಾರತದ ಒಪ್ಪಂದಗಳು ದೇಶಕ್ಕೆ ಪ್ರಯೋಜನಕಾರಿಯಾಗಿಲ್ಲ, ಅವು ಕೇವಲ ಅವರ ಸ್ವಂತ ಆರ್ಥಿಕ ಹಿತಾಸಕ್ತಿಗಳಿಗಾಗಿ ನಡೆದಿವೆ ಎಂದು ವಿಮರ್ಶಿಸಿದ್ದಾರೆ.
ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಹಣಕಾಸು ವಹಿವಾಟಿನಲ್ಲಿ ವಿಳಂಬವಾಗಬಹುದು. ಕೆಎಸ್‌ಆರ್ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕ ಸಂಘಟನೆಗಳು ಈ ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲವಾದರೂ, ಹಲವು ಕಡೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಾಲು, ತರಕಾರಿ ಮತ್ತು ಆಸ್ಪತ್ರೆಗಳಂತಹ ಅಗತ್ಯ ಸೇವೆಗಳಿಗೆ ಸಾಮಾನ್ಯವಾಗಿ ಬಂದ್ನಿಂದ ವಿನಾಯಿತಿ ಇರುತ್ತದೆ.

