ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ವಿವಿಧ ಸಮುದಾಯಗಳ ಏಳ್ಗೆಗೆ ಬದ್ಧರಾಗಿರುವ ಶಾಸಕ ಹರೀಶ್ ಪೂಂಜ ಅವರು ತಮ್ಮ ವಿವೇಚನಾ ಅನುದಾನದಡಿ ಮಹತ್ವದ ಹಣಕಾಸು ನೆರವನ್ನು ಬಿಡುಗಡೆ ಮಾಡಿದ್ದಾರೆ.
ಬಹುಕಾಲದಿಂದ ಬಾಕಿ ಉಳಿದಿದ್ದ ವಿವಿಧ ಸಮುದಾಯಗಳ ಬೇಡಿಕೆಗಳಿಗೆ ತ್ವರಿತ ಸ್ಪಂದನೆ ನೀಡಿರುವ ಅವರು, ಸಮುದಾಯ ಭವನಗಳ ನಿರ್ಮಾಣಕ್ಕಾಗಿ ತಲಾ ರೂ. 1 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ.
ಈ ಅನುದಾನದಡಿ ಗೌಡರ (ಒಕ್ಕಲಿಗರ) ಸಮುದಾಯ ಭವನಕ್ಕೆ ರೂ. 1 ಕೋಟಿ, ಕುಲಾಲ ಕುಂಬಾರರ ಸಮುದಾಯ ಭವನಕ್ಕೆ ರೂ. 1 ಕೋಟಿ ಹಾಗೂ ಕನ್ಯಾಡಿಯ ನಾರಾಯಣ ಗುರು ಸಭಾಭವನಕ್ಕೆ ರೂ. 1 ಕೋಟಿ ನೀಡಲಾಗಿದೆ.
ಈ ಕ್ರಮವು ಸಮುದಾಯಗಳ ಸಬಲೀಕರಣ, ಸಂಘಟಿತ ಬೆಳವಣಿಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಶಾಸಕರ ಈ ಕಾರ್ಯಕ್ಕೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಇನ್ನಷ್ಟು ಯೋಜನೆಗಳು ಜಾರಿಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.

