ಬೆಂಗಳೂರು : ಬಾಲ್ಯ ವಿವಾಹ ಕೇಸ್ ರದ್ದು ಮಾಡಲು ಅನಕ್ಷರತೆ ಆಧಾರವಾಗದು ಎಂದು ಹೈಕೋರ್ಟ್ ಹೇಳಿದ್ದು, ಪೋಷಕರ ಮೇಲಿನ ಕೇಸ್ ರದ್ದತಿಗೆ ನಿರಾಕರಿಸಿದ ಬಾಲ್ಯ ವಿವಾಹ ಮಾಡಿದ ಪೋಷಕರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಅನಕ್ಷರತೆ ಆಧಾರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, 16 ವರ್ಷ 9 ತಿಂಗಳ ವಯಸ್ಸಿನ ಬಾಲಕಿಗೆ ಮದುವೆ ಮಾಡಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಗೌರಿಬಿದನೂರು ಗ್ರಾಮಾಂತರ ಠಾಣಾ ಪೋಲೀಸರು ತಮ್ಮ ವಿರುದ್ಧ ದಾಖಲಾಗಿರುವ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಅಶೋಕ್(56), ಅಶ್ವತ್ಥ್ ನಾರಾಯಣ್(55), ರಂಗಮ್ಮ(49), ರಾಮಾಂಜಿನಮ್ಮ(48), ಶ್ರೀರಾಮಪ್ಪ(56) ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಮದುವೆಯಾಗಿರುವ ಯುವಕ- ಯುವತಿಯ ಪೋಷಕರಾಗಿದ್ದಾರೆ. ಯುವಕ -ಯುವತಿ ಪ್ರೀತಿಸುತ್ತಿದ್ದರು. ಅದಕ್ಕಾಗಿ ಮದುವೆ ಮಾಡಲಾಗಿದೆ. ದಂಪತಿಗೆ ಮಗು ಇದೆ. ಅರ್ಜಿದಾರರು ಅನಕ್ಷರಸ್ಥರು, ತಿಳಿವಳಿಕೆ ಇಲ್ಲದೆ ಬಾಲ್ಯ ವಿವಾಹ ಮಾಡಿದ್ದಾರೆ. ಹೀಗಾಗಿ ಪ್ರಕರಣ ರದ್ದು ಮಾಡಬೇಕೆಂದು ಕೋರಿದ್ದು , ಇದರಿಂದ ಕೆರಳಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅನಕ್ಷರತೆ ಬಾಲ್ಯ ವಿವಾಹ ಕೇಸ್ ರದ್ದು ಮಾಡಲು ಆಧಾರವಾಗುವುದಿಲ್ಲ. ಬಾಲ್ಯ ವಿವಾಹ ಪದ್ಧತಿ ನಿಲ್ಲಬೇಕು. ಪೋಷಕರು ಏನೆಂದು ತಿಳಿದುಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ಮದುವೆಯಾಗಿರುವ ಯುವತಿಗೆ ಮಗುವಿದೆ ಈ ಅಂಶ ಪರಿಗಣಿಸಿ ಪೋಕ್ಸೊ ಕಾಯ್ದೆ ರದ್ದು ಮಾಡಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ದಯೆ ತೋರುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

