ಶ್ರೀ ಕ್ಷೇತ್ರ ಅರ್ಕುಳದಲ್ಲಿ ನೂತನ ಅಶ್ವ ರಥದ ಸಮರ್ಪಣೆ – ಭಕ್ತರ ಅಪಾರ ಸ್ಪಂದನೆಯ ನಡುವೆ ಭವ್ಯ ಮೆರವಣಿಗೆ

0
20

ಶ್ರೀ ಕ್ಷೇತ್ರ ಅರ್ಕುಳದಲ್ಲಿ ನೂತನ ಅಶ್ವ ರಥದ ಸಮರ್ಪಣೆಯ ಅಂಗವಾಗಿ ಭಾನುವಾರ ಸಂಜೆ ಭವ್ಯ ಮೆರವಣಿಗೆ ಭಕ್ತಿಭಾವಪೂರ್ಣ ವಾತಾವರಣದಲ್ಲಿ ನಡೆಯಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ಹಾಗೂ ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಫರಂಗಿಪೇಟೆಯ ಸೇವಾಂಜಲಿ ಸಭಾಭವನದಿಂದ ಪ್ರಾರಂಭವಾದ ಮೆರವಣಿಗೆ ಅರ್ಕುಳ ಕ್ಷೇತ್ರದವರೆಗೆ ಸಾಗಿದ್ದು, ಮಾರ್ಗಮಧ್ಯೆ ಭಕ್ತರು ಹೂಮಾಲೆ, ಆರತಿ ಹಾಗೂ ಘೋಷಣೆಗಳ ಮೂಲಕ ಭಕ್ತಿಪೂರ್ಣ ಸ್ವಾಗತ ಕೋರಿದರು. ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಭವ್ಯತೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿನ ಕೃಷ್ಣ ಕುಮಾರ್ ಪೂಂಜಾ, ಕಂಪ ಸದಾನಂದ ಆಳ್ವ, ಬಾಸ್ಕರ ಚೌಟ, ತಾರಾನಾಥ ಕೊಟ್ಟಾರಿ, ಅರ್ಕುಳ ಬೀಡು ರತ್ನರಾಜ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ವಿವಿಧ ಭಜನಾ ತಂಡಗಳು, ಕುಣಿತ ಬಳಗಗಳು ಹಾಗೂ ಸಾಂಪ್ರದಾಯಿಕ ವಾದ್ಯಗೋಷ್ಠಿಗಳು ಭಕ್ತಿಗೀತೆಗಳ ಮೂಲಕ ಧಾರ್ಮಿಕ ಸಂಭ್ರಮವನ್ನು ಹೆಚ್ಚಿಸಿತು. ನೂತನ ಅಶ್ವ ರಥದ ಅಲಂಕಾರ ಭಕ್ತರ ಗಮನ ಸೆಳೆಯುತ್ತಿದ್ದು, ಕ್ಷೇತ್ರದ ವೈಭವವನ್ನು ಪ್ರತಿಬಿಂಬಿಸುವಂತಿತ್ತು.

ಶ್ರೀ ಕ್ಷೇತ್ರದ ಇತಿಹಾಸದಲ್ಲಿ ಅಶ್ವ ರಥದ ಸಮರ್ಪಣೆ ಒಂದು ಮಹತ್ವದ ಘಟ್ಟವಾಗಿದ್ದು, ಭಕ್ತ ಸಮುದಾಯದ ಏಕತೆ, ಶ್ರದ್ಧೆ ಮತ್ತು ಸಹಕಾರಕ್ಕೆ ಸಂಘಟಕರು ಕೃತಜ್ಞತೆ ಸಲ್ಲಿಸಿದರು. ಸಂಪೂರ್ಣ ಕಾರ್ಯಕ್ರಮ ಶಿಸ್ತಿನೊಂದಿಗೆ ಯಶಸ್ವಿಯಾಗಿ ನೆರವೇರಿತು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here