ತಕ್ಷಣ ಕ್ರಮ ಕೈಗೊಳ್ಳುವಂತೆ ‘ಸುರಾಜ್ಯ ಅಭಿಯಾನ’ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಾಲ್ಗುಣಿ ನದಿಗೆ ಸಮೀಪದ ಕೈಗಾರಿಕೆಗಳಿಂದ ವಿಷಕಾರಿ ರಾಸಾಯನಿಕ ಮತ್ತು ತ್ಯಾಜ್ಯಗಳನ್ನು ಅನಧಿಕೃತವಾಗಿ ಬಿಡಲಾಗುತ್ತಿದೆ. ಇದರಿಂದಾಗಿ ನದಿ ನೀರು ತೀವ್ರವಾಗಿ ಮಲಿನಗೊಂಡಿದ್ದು, ನೀರಿನ ಬಣ್ಣ ಬದಲಾಗಿ ಪರಿಸರದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದೆ. ತಣ್ಣೀರುಬಾವಿ ಸೇತುವೆ ಕಾಮಗಾರಿಗಾಗಿ ನದಿಯ ಹರಿವನ್ನು ತಾತ್ಕಾಲಿಕವಾಗಿ ತಡೆಹಿಡಿದಾಗ, ಕೇವಲ ಐದು ದಿನಗಳಲ್ಲಿ ಈ ಆಘಾತಕಾರಿ ಸತ್ಯ ಬಹಿರಂಗಗೊಂಡಿದೆ. ಈ ಮೊದಲು ಈ ವಿಷಕಾರಿ ತ್ಯಾಜ್ಯಗಳು ನೇರವಾಗಿ ಸಮುದ್ರಕ್ಕೆ ಸೇರುತ್ತಿದ್ದವು.
ನದಿಯಲ್ಲಿ ನೂರಾರು ಮೀನುಗಳು, ಹಾವುಗಳು ಹಾಗೂ ಇತರ ಜಲಚರಗಳು ಸತ್ತು ತೇಲುತ್ತಿರುವುದು ಜಲಚರಗಳ ಮಾರಣಹೋಮವನ್ನು ಸಾರುತ್ತಿದೆ. ಕಲುಷಿತ ನೀರಿನಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಜ್ವರ, ಹೊಟ್ಟೆ ಸಂಬಂಧಿತ ಕಾಯಿಲೆ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಇದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿದೆ.
ಈ ಕೃತ್ಯವು ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಸೆಕ್ಷನ್‌ಗಳ ಉಲ್ಲಂಘನೆಯಾಗಿದ್ದು, ನಾಗರಿಕರ ಮೂಲಭೂತ ಹಕ್ಕಿನ ಹರಣವಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ವು ಜಿಲ್ಲಾಧಿಕಾರಿಗಳಾದ ಶ್ರೀ. ರಾಜು ಕೆ ಇವರಿಗೆ ಮನವಿ ಸಲ್ಲಿಸಿ ತಕ್ಷಣದ ಕ್ರಮಕ್ಕೆ ಆಗ್ರಹಿಸಿದೆ.
ಮಾಲಿನ್ಯದ ಮೂಲ ಪತ್ತೆಹಚ್ಚಿ ತಪ್ಪಿತಸ್ಥ ಕೈಗಾರಿಕೆಗಳ ಪರವಾನಗಿ ರದ್ದುಗೊಳಿಸಬೇಕು, ನದಿ ನೀರನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಬಾಧಿತ ಜನರಿಗಾಗಿ ತಕ್ಷಣ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಬೇಕು ಎಂದು ಶ್ರೀ ಪ್ರಶಾಂತ್ ಕಾಂಚನ್ ಅವರು ಒತ್ತಾಯಿಸಿದ್ದಾರೆ. ವಿಳಂಬ ಧೋರಣೆಯು ಪರಿಸರಕ್ಕೆ ಮತ್ತಷ್ಟು ಹಾನಿ ಉಂಟುಮಾಡಲಿದ್ದು, ಜಿಲ್ಲಾಡಳಿತವು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಎಂ ಜೆ ಶೆಟ್ಟಿ, ಭಾಸ್ಕರ್ ಕೋಲ್ನಾಡ್, ಅಮರನಾಥ್ ಶೆಟ್ಟಿ, ರಾಯಿಕಟ್ಟೆ ನಿವಾಸಿಗಳಾದ ತುಳಸಿದಾಸ್ ಕೂಳೂರು ಮತ್ತು ಅವರೆಲ್, ನ್ಯಾಯವಾದಿಗಳಾದ ಸುಷ್ಮಾ, ಈಶ್ವರ್ ಕೊಟ್ಟಾರಿ, ಜಲಜಾಕ್ಷಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ ದಿನಕರ ಪೂಜಾರಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.

