ರೀಲ್ಸ್‌ಗಾಗಿ ರಸ್ತೆಯಲ್ಲಿ ಬೈಕ್ ಸ್ಟಂಟ್ : ಮಣಿಪಾಲದಲ್ಲಿ ಯುವಕನ ವಿರುದ್ಧ ಪ್ರಕರಣ

0
25

ಮಣಿಪಾಲ : ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಅನ್ನು ಅಪಾಯಕಾರಿಯಾಗಿ ಜಂಪ್ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಯುವಕನೊಬ್ಬನ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಸಾಯಿರಾಧ ವಿಲ್ಲಾ ಎದುರು ಇರುವ ಮಣಿಪಾಲ–ಅಂಬಾಗಿಲು ಸಾರ್ವಜನಿಕ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಮೋಹಿತ್ ಸ್ವರೂಪ್ (31) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಕೆಎ-20-ಎಚ್‌ಡಿ-4838 ನೋಂದಣಿ ಸಂಖ್ಯೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ನಲ್ಲಿ ಅಂಬಾಗಿಲು ಕಡೆಯಿಂದ ಮಣಿಪಾಲದತ್ತ ತೆರಳುತ್ತಿದ್ದ ಆರೋಪಿ, ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾನೆ. ಈ ವೇಳೆ ರಸ್ತೆಯ ಮಧ್ಯದಲ್ಲೇ ಬೈಕ್ ಅನ್ನು ಜಂಪ್ ಮಾಡಿ ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡಿದ್ದಾನೆ.

ಈ ಸ್ಟಂಟ್‌ನ ವಿಡಿಯೋವನ್ನು ಚಿತ್ರೀಕರಿಸಿ ಆಗಸ್ಟ್ 2ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ರೂಪದಲ್ಲಿ ಹಂಚಲಾಗಿದ್ದು, ಅದು ವೈರಲ್ ಆಗಿತ್ತು. ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ ಮಣಿಪಾಲ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಂಟ್‌ಗೆ ಬಳಸಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 127/2026ರಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ರೀಲ್ಸ್, ಲೈಕ್ಸ್ ಅಥವಾ ವ್ಯೂಸ್‌ಗಾಗಿ ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಯಾವುದೇ ಸಾಹಸ ಪ್ರದರ್ಶನಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.