ವಂದೇ ಭಾರತ್ ರೈಲು ಮಂಗಳೂರು ಸಿಟಿ ಪ್ರವೇಶಕ್ಕೆ ವಿರೋಧ

0
28

ಉಡುಪಿ : ಬೆಂಗಳೂರು ಮತ್ತು ಮಡಗಾಂವ್ ನಡುವೆ ಸಂಚರಿಸಲಿರುವ ಬಹುನಿರೀಕ್ಷಿತ ‘ವಂದೇ ಭಾರತ್ ಎಕ್ಸ್‌ಪ್ರೆಸ್‌’ ರೈಲು ಮಂಗಳೂರು ನಗರದ ಒಳಭಾಗಕ್ಕೆ (ಮಂಗಳೂರು ಸೆಂಟ್ರಲ್) ಪ್ರವೇಶಿಸಬಾರದು ಎಂದು ಕೊಂಕಣ ರೈಲ್ವೆ ಸಲಹಾ ಸಮಿತಿ ಸದಸ್ಯ ಗಣೇಶ್ ಪುತ್ರನ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ ಈ ವೇಗದ ರೈಲನ್ನು ಪರಿಚಯಿಸುತ್ತಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಲಾಬಿಗಳ ಒತ್ತಡಕ್ಕೆ ಮಣಿದು ರೈಲನ್ನು ಮಂಗಳೂರು ನಗರದ ಒಳಭಾಗಕ್ಕೆ ಕೊಂಡೊಯ್ಯಲು ಸಂಚು ರೂಪಿಸಲಾಗುತ್ತಿದೆ ಎಂದು ಆಪಾದಿಸಿದ್ದಾರೆ.

ಸಮಯ ವ್ಯರ್ಥ

ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಚಾಲಕ ವಿವೇಕ ನಾಯಕ್ ಮಾತನಾಡಿ, ಈಗಾಗಲೇ ಬೆಂಗಳೂರು-ಮೈಸೂರು-ಮುರುಡೇಶ್ವರ ರೈಲು ಮಂಗಳೂರು ನಗರ ಪ್ರವೇಶಿಸಿ ಹೊರಬರಲು ಕನಿಷ್ಠ 2 ಗಂಟೆಗಳ ಕಾಲ ವಿಳಂಬವಾಗುತ್ತಿದೆ. ವಂದೇ ಭಾರತ್ ರೈಲಿಗೂ ಇದೇ ಪರಿಸ್ಥಿತಿ ಎದುರಾದರೆ ಸುಮಾರು 700 ಕಿ.ಮೀ ಪ್ರಯಾಣದ ಉದ್ದೇಶವೇ ವ್ಯರ್ಥವಾಗಲಿದೆ ಎಂದರು.

ಪಡಿಲ್ ಮಾರ್ಗಕ್ಕೆ ಆದ್ಯತೆ

ರೈಲು ಮಂಗಳೂರಿನ ಪಡಿಲ್ ಮಾರ್ಗವಾಗಿ ಸಂಚರಿಸಿದರೆ ಪರೆಂಗಿಪೇಟೆ, ಜೋಕಟ್ಟೆ, ಸುರತ್ಕಲ್, ಉಡುಪಿ ಮತ್ತು ಕುಂದಾಪುರ ಭಾಗದ ಜನರಿಗೆ ಅತೀ ಕಡಿಮೆ ಅವಧಿಯಲ್ಲಿ ತಲುಪಲು ಸಾಧ್ಯವಾಗುತ್ತದೆ. ಒಂದು ವೇಳೆ ರೈಲು ಮಂಗಳೂರು ನಗರ ಪ್ರವೇಶಿಸಿದರೆ, ಸಮಯ ಹೊಂದಾಣಿಕೆಗಾಗಿ ಸುರತ್ಕಲ್, ಉಡುಪಿ, ಕುಮಟಾ ಮತ್ತು ಕಾರವಾರ ನಿಲ್ದಾಣಗಳ ನಿಲುಗಡೆಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಮಂಗಳೂರು ರೈಲ್ವೆ ನಿಲ್ದಾಣವನ್ನು ಕೇರಳದ ದಕ್ಷಿಣ ರೈಲ್ವೆ (Southern Railway) ವಲಯದಿಂದ ಮುಕ್ತಗೊಳಿಸಿ, ಹುಬ್ಬಳ್ಳಿಯ ನೈಋತ್ಯ ರೈಲ್ವೆ (South Western Railway) ವಲಯಕ್ಕೆ ಸೇರಿಸಬೇಕೆಂದು ಅಗ್ರಹಿಸಿದರು. ಈ ಬೇಡಿಕೆಯನ್ನು ರೈಲ್ವೆ ಸಚಿವ ವಿ. ಸೋಮಣ್ಣ ಗಮನಕ್ಕೂ ತರಲಾಗಿದೆ ಎಂದರು. ಹಿತರಕ್ಷಣ ಸಮಿತಿ ಸದಸ್ಯ ಅಭಿಜಿತ ಸಾರಂಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here