ಕಾರಿನಲ್ಲಿ ಹಿಂಬಾಲಿಸಿ ಬಂದು ಅಪರಿಚಿತರಿಂದ ಹಲ್ಲೆ

0
4

ಉಡುಪಿ: ಕಾರಿಗೆ ಅಡ್ಡನಿಂತು ಗಲಾಟೆ ಮಾಡಿದ್ದಲ್ಲದೆ, ಬಳಿಕ ವಾಹನವನ್ನು ಹಿಂಬಾಲಿಸಿಕೊಂಡು ಬಂದು ಸೋಡಾ ಬಾಟಲಿಯಿಂದ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಪೆರ್ಡೂರು ಪೇಟೆ ಬಸ್​ ನಿಲ್ದಾಣದ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸ್​ ಠಾಣೆಯಲ್ಲಿ ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೆರ್ಡೂರು ಗ್ರಾಮದ ನಿವಾಸಿ ಸತೀಶ (42) ಎಂಬವರು ಶನಿವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಹೆಬ್ರಿಗೆ ಹೋಗಿ ಹೋಳಿಗೆ ಖರೀದಿಸಿ ತಮ್ಮ ಥಾರ್​ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿಗೆ ತಲುಪಿದಾಗ 3-&4 ಜನ ಅಪರಿಚಿತರು ತಮ್ಮ ಕಾರನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಸತೀಶ್​ ಅವರ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಏಕಾಏಕಿ ಕಾರಿನ ಬೊನೆಟ್​ ಮೇಲೆ ಬಡಿದು ಅಶ್ಲೀಲ ಶಬ್ದಗಳಿಂದ ಬೈದು ಗಲಾಟೆ ಮಾಡಿದ್ದಾರೆ.

ಇದರಿಂದ ಗಾಬರಿಗೊಂಡ ಸತೀಶ್​ ಹಾಗೂ ಅವರ ಸ್ನೇಹಿತರು ಅಲ್ಲಿಂದ ಪೆರ್ಡೂರಿನತ್ತ ಮುನ್ನಡೆದಿದ್ದಾರೆ. ಆದರೆ ಆರೋಪಿಗಳು ಹಿಂಬಾಲಿಸಿಕೊಂಡು ಬಂದು ಪೆರ್ಡೂರು ಪೇಟೆಯ ಬಸ್​ ನಿಲ್ದಾಣದ ಬಳಿ ಕಾರು ತಡೆದು ಸೋಡಾ ಬಾಟಲಿಯಿಂದ ದಾಳಿ ನಡೆಸಿದ್ದಾರೆ. ಶ್ರೀಕಾಂತ್​ ಎಂಬವರನ್ನು ಕೊಲ್ಲುವ ಉದ್ದೇಶದಿಂದ ಅವರ ತಲೆಗೆ ಸೋಡಾ ಬಾಟಲಿಯಿಂದ ಬಲವಾಗಿ ಹಲ್ಲೆ ಮಾಡಿದ್ದಾರೆ. ಕಾರಿನಲ್ಲಿದ್ದ ಎಲ್ಲರಿಗೂ ಕೈಯಿಂದ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ.

ಗಾಯಾಳು ಸತೀಶ್​ ನೀಡಿದ ದೂರಿನನ್ವಯ ಹಿರಿಯಡ್ಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.