ಕಾವ್ಯಾಭಿಷೇಕ ಪರಿಕಲ್ಪನೆ ಧಾರ್ಮಿಕ ಪೂಜ್ಯಭಾವನೆಯದು. ಅದು ಮುಂದುವರಿದು ಸಾಮಾಜಿಕತೆಯಾಗಿ ಮತ್ತೆ ಸಾಹಿತ್ಯಿಕ ರೂಪ ಭಾವ ಆವೀರ್ಭವಿಸಿ ಕವಿಗೋಷ್ಠಿಯಲ್ಲಿ ಅರ್ಥಪೂರ್ಣವಾಯಿತು. ತ್ಯಾಗ ಮೂರ್ತಿ ಬಾಹುಬಲಿಗೆ ಕಾವ್ಯಾಭಿಷೇಕ ಈ ಕವಿಗೋಷ್ಠಿಯನ್ನು ಆಯೋಜಿಸಿದ ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಪರಿಕಲ್ಪನೆ ವಿನೂತನವಾದುದು. ಕಾವ್ಯಾಭಿಷೇಕದಲ್ಲಿ ಬಾಹುಬಲಿಯ ಸಾರಿದ ಅಹಿಂಸೆ ಸತ್ಯ ಶಾಂತಿ ಸಾಮರಸ್ಯದ ತತ್ವ ನಮಗೆ ಅನುಭೂತಿಯಾಯಿತು. ಬಾಹುಬಲಿಯ ಪ್ರತಿಮೆಯು ಸದಾ ಚೈತನ್ಯದಾಯಕ. ಮಾತು ಮನದ ದೈವವಾದರೆ ಮೌನ ಮಾತಿನ ಪ್ರತಿಮೆ ವರಕವಿ ಬೇಂದ್ರೆಯವರ ನುಡಿ ತೋರಣದ ಚೆಲುವಿನಂತೆ ಕಾವ್ಯಾಭಿಷೇಕದಲ್ಲಿ ಕಂಡಂತಾಯಿತು. ಬಾಹುಬಲಿಯ ಭಾವ ಅದು ವಿನೀತ ಭಾವ. ಕವಿತೆಯಲ್ಲಿ ಆವಿರ್ಭವಿಸಿ ಸಹೃದಯರಿಗೆ ವಿಶೇಷ ರಸಾನುಭೂತಿಯಾಯಿತು. ಬಾಹುಬಲಿಯ ಪರಿಶುದ್ಧ ವ್ಯಕ್ತಿತ್ವದ ಆರಾಧನೆಯೇ ಕಾವ್ಯಾಭಿಷೇಕದಲ್ಲಿ ಕವಿಗಳ ಸಂಕಲ್ಪವಾಗಿದೆ. ಕಾವ್ಯಾಭಿಷೇಕದಲ್ಲಿ ಬಾಹುಬಲಿಯ ಆದರ್ಶಗಳು ಗುಣಗಾನ ಮತ್ತು ತಾತ್ವಿಕತೆಯನ್ನು ತಿಳಿಸಿದೆ. ಸರ್ವ ಜನಾಂಗದ ಶಾಂತಿಯ ತೋಟದ ನಾಡಿನಲ್ಲಿ ಕಾರ್ಕಳ ಜೈನರುದ್ಯಾನದ ಚೆಲುವಿದೆ ಎಂದು ಹಿರಿಯ ಸಾಹಿತಿ ಜ್ಯೋತಿ ಗುರುಪ್ರಸಾದ್ ರವರು ಹೇಳಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ಜೈನಧರ್ಮ ಜೀರ್ಣೋದ್ಧಾರ ಸಂಘ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಗೊಮ್ಮಟ ಬೆಟ್ಟದಲ್ಲಿ ಫಾಲ್ಗುಣಿ ಹುಣ್ಣಿಮೆ ಚೆಲುವಿನಲ್ಲಿ ಆಯೋಜಿಸಿದ ತ್ಯಾಗ ಮೂರ್ತಿ ಗೊಮ್ಮಟೇಶನಿಗೆ ಕಾವ್ಯಾಭೀಷೇಕ ಕವಿಗೋಷ್ಠಿಯ ಸಮನ್ವಯಕಾರರಾಗಿ ಭಾಗವಹಿಸಿ ಮಾತಾನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ವಹಿಸಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾನಾಡುತ್ತ ಬರಲಿರುವ ಕಾರ್ಕಳ ಮಸ್ತಕಾಭಿಷೇಕದ ಸಂಭ್ರಮ ಇಡೀ ಕನ್ನಡ ನಾಡಿಗೆ ಪಸರಿಸಲಿದೆ ಈ ಸಂಭ್ರಮಕ್ಕೆ ಪೂರಕವಾಗಿ ಕಾವ್ಯಾಭಿಷೇಕದ ಪರಿಕಲ್ಪನೆಯಲ್ಲಿ ಈ ಕವಿಗೋಷ್ಠಿ ಪರಿಕಲ್ಪನೆ ಎಂದರು. ಗೋಷ್ಠಿಯ ಉದ್ಘಾಟಿಸಿದ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಅಸೋಸಿಯೇಶನ್ ನ ರಾಜ್ಯಾದ್ಯಕ್ಷರಾದ ಡಾ ರವೀಂದ್ರ ಶೆಟ್ಟಿಯವರು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಹಾಗೂ ಬಾಹುಬಲಿಯು ತ್ಯಾಗವನ್ನು ಸಾರಿದ ಭೋಗವನ್ನು ತ್ಯಜಿಸಿದ ಸಮನ್ವಯದ ಸಾಮರಸ್ಯ ಬೆಳಗಿಸಿದ ಜೀವನವೇ ನಮಗೆ ಸಂದೇಶವಾಗಿದೆ ಎಂದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡಿ ತಾವು ರಚಿಸಿದ ಕವನ ವಾಚಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜೈನ ಧರ್ಮ ಜೀರ್ಣೋದ್ಧಾರ ಸಂಘ ಕಾರ್ಕಳ ಇದರ ಗೌರವ ಕಾರ್ಯದರ್ಶಿ ಮೋಹನ್ ಪಡಿವಾಳ್ ರವರು ರಂಗ ಸಂಸ್ಕೃತಿ ಕಾರ್ಕಳ ಅಧ್ಯಕ್ಷ ನಿತ್ಯಾನಂದ ಪೈ ತಾಲೂಕು ಸಮ್ಮೇಳನ ಸರ್ವಾಧ್ಯಕ್ಷ ಸಿದ್ಧಾಪುರ ವಾಸುದೇವ ಭಟ್ಟ ಬೆಟ್ಟದ ಅರ್ಚಕ ನಾಗರಾಜ ಇಂದ್ರ ಶುಭ ಹಾರೈಸಿದರು. ಘಟಕದ ಕೋಶಾಧಿಕಾರಿ ಅರುಣ್ ರಾವ್ ಗೌರವ ಕಾರ್ಯದರ್ಶಿ ಸುಧಾಕರ ಪೊಸ್ರಾಲ್ ಕಾರ್ಯದರ್ಶಿ ದೇವದಾಸ ಕೆರೆಮನೆ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಸಿದ್ಧಾಪುರ ವಾಸುದೇವ ಭಟ್ಟ, ಗಂಗಾಧರ ಪಣಿಯೂರು, ರಮೇಶ್ ಪ್ರಭು , ಬಿ ವಿ ರಾವ್ ಮಾಲತಿ ವಸಂತರಾಜ್, ಅನುಪಮ ಚಿಂಪ್ಣೂಕರ್, ಸುಲೋಚನಾ ಬಿ ವಿ , ಶೈಲಜಾ ಹೆಗ್ಡೆ, ಡಾ ಸುಮತಿ ಪ್ರಜ್ವಲಾ ಶೆಣೈ, ಹರಿಪ್ರಸಾದ್ ನಂದಳಿಕೆ, ಅವನೀ ಉಪಾಧ್ಯ , ದೇವದಾಸ ಕೆರೆಮನೆ ಮತ್ತು ಗಣೇಶ್ ಜಾಲ್ಸೂರು ಕವನದ ಮೂಲಕ ಕಾವ್ಯಾಭೀಷಕ ಮಾಡಿದರು. ಭೋಜರಾಜ ಕಡಂಬ ಹಾಗೂ ನಾಗರಾಜ ಇಂದ್ರ ಜಿನಸ್ತುತಿಗೈದರು. ಪ್ರಾಂಜಲಿ ಜಿನಸ್ತುತಿ ಗಾಯನ ಮಾಡಿದರು. ಶಶಿಕಲಾ ಹೆಗ್ಡೆ ಪ್ರಾರ್ಥಿಸಿ, ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿ ,ಗಣೇಶ್ ಜಾಲ್ಸೂರು ನಿರೂಪಿಸಿದರು. ಸುಧಾಕರ ಪೊಸ್ರಾಲು ಧನ್ಯವಾದವಿತ್ತರು. ಶಿವಸುಬ್ರಹ್ಮಣ್ಯ ಭಟ್ , ಜಿಲ್ಲಾ ಪ್ರತಿನಿಧಿ ನರಸಿಂಹ ಮೂರ್ತಿ,ತಿಪ್ಪೇಸ್ವಾಮಿ , ಸಮರ್ಥ್ ಸಹಕರಿಸಿದರು.

