ಉಡುಪಿ: ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರು ಒಂದೆಡೆ ಭರವಸೆ ನೀಡುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರ್ಕಾರ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬ್ರಹ್ಮಗಿರಿ ಸರ್ಕಲ್ ಬಳಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಎಲ್‌ಪಿಜಿ ದರ ಏರಿಕೆ ವಿರುದ್ಧದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ಕೇವಲ 11 ತಿಂಗಳಲ್ಲಿ ಗೃಹಬಳಕೆ ಸಿಲಿಂಡರ್ ಬೆಲೆ ಒಟ್ಟು 110 ರೂಪಾಯಿ ಹೆಚ್ಚಳವಾಗಿದೆ. ಇದು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಜೀವನದ ಮೇಲೆ ಭಾರಿ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಸಂಕಷ್ಟ
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದರಿಂದ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗಿ, ಅಂತಿಮವಾಗಿ ಸಾಮಾನ್ಯ ಗ್ರಾಹಕನೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಇಂಧನ ಕೊರತೆ ಇಲ್ಲ ಎಂದು ಹೇಳುವ ಸರ್ಕಾರ, ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರನ್ನು ವಂಚಿಸುತ್ತಿದೆ ಎಂದು ಅವರು ದೂರಿದರು.
ˌ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಪೂರ್ˌ ಮುಖಂಡರಾದ ದಿನೇಶ್ ಹೆಗ್ಡೆ ಮಳವಳ್ಳಿ ˌ ವೆರೋನಿಕಾ ಕರ್ನೆಲಿಯೋ ˌ ಜ್ಯೋತಿ ಹೆಬ್ಬಾರ್ ˌ ಹರೀಶ್ ಕಿಣಿ ˌ ಶಂಕರ್ ಕುಂದರ್ˌ ಗೋಪಿನಾಥ್ ಭಟ್ ಭುಜಂಗ ಶೆಟ್ಟಿ ˌ ಭಾಸ್ಕರ್ ರಾವ್ ಕಿದಿಯೂರು ˌ ಪ್ರಖ್ಯಾತ್ ಶೆಟ್ಟಿ ˌ ಶಬ್ಬಿರ್ ಅಹ್ಮದ್ ˌ ಕೀರ್ತಿ ಶೆಟ್ಟಿ ˌ ಪ್ರಶಾಂತ ಜತ್ತಣ್ಣˌ ˌ ಮಹಾಬಲ ಕುಂದರ್ ˌ ಕಿರಣ್ ಹೆಗ್ಡೆ ˌ ಜಯಕುಮಾರ್ˌ ಮಮತಾ ಶೆಟ್ಟಿ ಸುಖನ್ಯ ˌ ಮೀನಾಕ್ಷಿ ಮಾಧವ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.

