ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ಹಣದಾಸೆಗಾಗಿ 15 ವರ್ಷದ ಮಗಳನ್ನು ತಾಯಿಯೇ ವೇಶ್ಯಾವಾಟಿಕೆಗೆ ದೂಡಿದ ಘಟನೆ ಬೆಳಕಿಗೆ ಬಂದ್ದಿದ್ದು,ಈ ಸಂಬಂಧ ಬಾಲಕಿಯ ತಾಯಿ, ಮಲತಂದೆ ಹಾಗೂ ಮಧ್ಯವರ್ತಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕಿಯನ್ನು ರಕ್ಷಿಸಿದ್ದಾರೆ.
ತಾಯಿ ಮತ್ತು ಮಲತಂದೆ ಪ್ರತಿದಿನ ಕಾರಿನಲ್ಲಿ ಬಾಲಕಿಯನ್ನು ಮಧ್ಯವರ್ತಿಯ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು. ಅಲ್ಲಿ ಬಾಲಕಿ ಸಂಜೆವರೆಗೂ ಗಿರಾಕಿಗಳ ಕಿರುಕುಳಕ್ಕೆ ಬಲಿಯಾಗುತ್ತಿದ್ದಳು. ಬಾಲಕಿಯೊಂದಿಗೆ ಸಮಯ ಕಳೆಯಲು ಮಧ್ಯವರ್ತಿಯು 6 ರಿಂದ 10 ಸಾವಿರ ರೂ. ವರೆಗೂ ಹಣ ನಿಗದಿಪಡಿಸುತ್ತಿದ್ದಳು. ಇದರಲ್ಲಿ ಅರ್ಧದಷ್ಟು ಹಣವನ್ನು ಆಕೆಯ ತಾಯಿಗೆ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಹಣದಾಸೆಗೆ ಬಿದ್ದು ತನ್ನ 15 ವರ್ಷದ ಮಗಳನ್ನು ಮಾಂಸದಂಧೆಗೆ ದೂಡಿದ ತಾಯಿಯ ಕರಾಳ ಕೃತ್ಯ ಚಂದ್ರಾಲೇಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬಯಲಾಗಿದೆ. ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಆರೋಪದ ಮೇಲೆ ಬಾಲಕಿಯ ತಾಯಿ, ಆಕೆಯ ಮಲತಂದೆ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದು, ಪೊಲೀಸರು ತನಿಕೆ ಮುಂದುವರಿಸಿದ್ದಾರೆ.

