ಬೈಂದೂರು: ಗೋವಾದಿಂದ ಕೇರಳಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಕಿರಿಮಂಜೇಶ್ವರದ ಹೈಸ್ಕೂಲ್ ಬಳಿ ಸಂಭವಿಸಿದೆ. ಕೇರಳದ ಕೊಲ್ಲಂ ಜಿಲ್ಲೆಯ ಸೇಪು ರಹೇಮಾನ್ (33) ಮೃತಪಟ್ಟ ದುರ್ದೈವಿ.ಸೇಪು ರಹೇಮಾನ್ ಅವರು ತಮ್ಮ ಸಂಬಂಧಿಕರಾದ ನಿಸಾಮ್ ಮತ್ತು ಸಾಧಿಕ್ ಅವರೊಂದಿಗೆ ಮಾರ್ಚ್ 17ರಂದು ರಾತ್ರಿ ಗೋವಾ ಮಡಗಾಂವ್‌ನಿಂದ ತಿರುವನಂತಪುರಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (22660) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ರೈಲಿನ ಬಾಗಿಲಿನ ಸಮೀಪಕ್ಕೆ ಬಂದಿದ್ದರು.ರೈಲು ಬೈಂದೂರು ಸಮೀಪದ ಕಿರಿಮಂಜೇಶ್ವರ ಹೈಸ್ಕೂಲ್ ಬಳಿ ಚಲಿಸುತ್ತಿದ್ದಾಗ, ಸೇಪು ರಹೇಮಾನ್ ಅವರು ಆಯತಪ್ಪಿ ರೈಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಟ್ರ್ಯಾಕ್ ಮೇಲೆ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

