ಉಡುಪಿ: ಮಿಷನ್ ಕಾಂಪೌಂಡ್ ಪರಿಸರದಲ್ಲಿ ಆಯೋಜಿಸಲಾಗಿರುವ ತಮಿಳುನಾಡಿನ ಮೋಹನ್ ಸಿ. ಲಾಜರಸ್ ನೇತೃತ್ವದ ಸಮಾಧಾನ ಮಹೋತ್ಸವ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶುಕ್ರವಾರ ಅಜ್ಜರಕಾಡು ಪಾರ್ಕ್ ಬಳಿ ಪ್ರತಿಭಟನೆ ನಡೆಯಿತು.

ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಮೋಹನ್ ವಿರುದ್ಧ ಹಿಂದೂ ದೇವಸ್ಥಾನಗಳನ್ನು ಅವಹೇಳನಕಾರಿಯಾಗಿ ಟೀಕಿಸಿದ ಆರೋಪವಿದ್ದು ಈತನ ಜೀಸಸ್ ರಿಡೀಮ್ಸ್ ಸಂಸ್ಥೆಯು ವಿದೇಶಿ ಹಣವನ್ನು ದುರ್ಬಳಕೆ ಮಾಡಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದೆ ಎಂಬ ಕಾರಣಕ್ಕೆ ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಸಂಸ್ಥೆಯ ವಿದೇಶಿ ದೇಣಿಗೆ ಪರವಾನಗಿಯನ್ನು ಅಮಾನತುಗೊಳಿಸಿದೆ. ಈತನ ಕಾರ್ಯಕ್ರಮಕ್ಕೆ ಜಿಲ್ಲೆ ಹೊರ ಜಿಲ್ಲೆಗಳಿಂದ ಹಿಂದುಗಳನ್ನು ವಾಹನದಲ್ಲಿ ಕರೆತರಲಾಗುತ್ತಿದೆ. ಮತಾಂತರಕ್ಕೆ ಕುಮ್ಮಕ್ಕು ನೀಡುವ ಕಾರ್ಯಕ್ರಮವನ್ನು ವಿರೋಧಿಸಲಾಗುವುದು ಎಂದರು.

ಪ್ರತಿಭಟನೆ ನಂತರ ಕಾರ್ಯಕರ್ತರು ಸಮಾವೇಶ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ತೆರಳಿದರು. ಈ ಸಂದರ್ಭದಲ್ಲಿ ಮೆರವಣಿಗೆ ತಡೆೆದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಮಣಿಪಾಲ ಠಾಣೆಗೆ ಕರೆದುಕೊಂಡು ಹೋಗಿ ಮುಚ್ಚಳಿಕೆ ಬರೆದು ಬಿಡುಗಡೆಗೊಳಿಸಿದರು.
ಮಾಜಿನಗರ ಸಭಾ ಸದಸ್ಯ ವಿಜಯ ಕೊಡವರು, ಮುಖಂಡರಾದ ಮಹೇಶ್ ಬೈಲೂರು, ಉಮೇಶ್ ಶೆಟ್ಟಿ, ನಿಖಿಲ್, ಉಮೇಶ್ ಸೂಡ, ಮೋಹನ್ ಭಟ್, ಉದ್ಯಮಿ ಅಜಯ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ದಿನೇಶ್ ಸಾಮಂತ್ ಉಪಸ್ಥಿತರಿದ್ದರು.

