ಏಪ್ರಿಲ್‌ ನಿಂದ ಹೊಸ ವಾಹನಗಳ ಹೆಡ್‌ಲ್ಯಾಂಪ್‌ ನಿಯಮ ಬದಲು : ಲೋ ಬೀಮ್‌ ಕಡ್ಡಾಯ

0
119

ನವದೆಹಲಿ : ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದೆ. ಮುಂದಿನ ಏಪ್ರಿಲ್‌ನಿಂದ ದೇಶದಲ್ಲಿ ಮಾರಾಟವಾಗುವ ಹೊಸ ಬೈಕ್‌ಗಳು, ಕಾರುಗಳು ಹಾಗೂ ಇತರ ವಾಹನಗಳ ಸ್ವಯಂಚಾಲಿತ ಹೆಡ್‌ಲ್ಯಾಂಪ್‌ ವ್ಯವಸ್ಥೆಯಲ್ಲಿ ಲೋ ಬೀಮ್‌ ಮೋಡ್‌ ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಿಟ್ಟಿದೆ.

ಈ ಸಂಬಂಧ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ (CMVR) ಕರಡು ತಿದ್ದುಪಡಿ ತರಲು ಸಚಿವಾಲಯ ಪ್ರಸ್ತಾವಿಸಿದೆ. ಹೊಸ ನಿಯಮ ಜಾರಿಗೆ ಬಂದರೆ, ವಾಹನಗಳಲ್ಲಿರುವ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ ವ್ಯವಸ್ಥೆ ಸಕ್ರಿಯವಾಗಿರುವ ಸಂದರ್ಭದಲ್ಲಿ ಹೆಡ್‌ಲ್ಯಾಂಪ್‌ಗಳು ಸ್ವಯಂಚಾಲಿತವಾಗಿ ಹೈ ಬೀಮ್‌ಗೆ ಬದಲಾಗಿ ಲೋ ಬೀಮ್‌ನಲ್ಲೇ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ.

ಹೈ ಬೀಮ್‌ನಿಂದ ಚಾಲಕರಿಗೆ ತೊಂದರೆ

ರಾತ್ರಿ ವೇಳೆ ವಾಹನ ಚಾಲಕರು ಅತಿಯಾದ ತೀವ್ರತೆಯ ಹೈ ಬೀಮ್‌ ಬಳಸುವುದರಿಂದ ಎದುರು ದಿಕ್ಕಿನಿಂದ ಬರುವ ವಾಹನಗಳ ಚಾಲಕರ ಕಣ್ಣುಗಳಿಗೆ ತೀವ್ರ ಬೆಳಕು ಬಿದ್ದು, ಕೆಲ ಕ್ಷಣಗಳ ಕಾಲ ದೃಷ್ಟಿ ಮಸುಕಾಗುವ ಸಾಧ್ಯತೆ ಇರುತ್ತದೆ. ಇದರಿಂದ ವಾಹನದ ನಿಯಂತ್ರಣ ಕಳೆದುಕೊಳ್ಳುವ ಹಾಗೂ ರಸ್ತೆ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗುತ್ತದೆ.

ವಿಶೇಷವಾಗಿ ಹೆದ್ದಾರಿ ಹಾಗೂ ಕಡಿಮೆ ಬೆಳಕಿನ ರಸ್ತೆಗಳಲ್ಲಿನ ಸಂಚಾರದ ವೇಳೆ ಎದುರಿನಿಂದ ಬರುವ ವಾಹನಗಳ ಹೈ ಬೀಮ್‌ ಬೆಳಕು ಚಾಲಕರಿಗೆ ಗಂಭೀರ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈ ಬೀಮ್‌ನಿಂದ ಉಂಟಾಗುವ ಗ್ಲೇರ್‌ (ತೀವ್ರ ಬೆಳಕಿನ ಕಿರಿಕಿರಿ) ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹೊಸ ನಿಯಮದತ್ತ ಹೆಜ್ಜೆ ಇಟ್ಟಿದೆ.

ಈಗಿರುವ ವ್ಯವಸ್ಥೆಯಲ್ಲಿ ಏನಿದೆ?

ಪ್ರಸ್ತುತ ಹಲವು ಹೊಸ ವಾಹನಗಳಲ್ಲಿ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ ಆನ್‌ ವ್ಯವಸ್ಥೆ ಅಳವಡಿಸಲಾಗಿದೆ. ವಾಹನದ ಸೆಟ್ಟಿಂಗ್‌ಗಳು ಹಾಗೂ ಚಾಲನಾ ಪರಿಸ್ಥಿತಿಯನ್ನು ಆಧರಿಸಿ ಈ ವ್ಯವಸ್ಥೆ ಲೋ ಬೀಮ್‌ ಅಥವಾ ಹೈ ಬೀಮ್‌ ಮೋಡ್‌ಗೆ ಬದಲಾಗುವ ಸಾಧ್ಯತೆ ಇದೆ.

ಆದರೆ ಪ್ರಸ್ತಾವಿತ ತಿದ್ದುಪಡಿ ಜಾರಿಯಾದರೆ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ ವ್ಯವಸ್ಥೆ ಸಕ್ರಿಯವಾಗಿರುವ ಸಂದರ್ಭದಲ್ಲಿ ಲೋ ಬೀಮ್‌ ಮೋಡ್‌ ಕಡ್ಡಾಯವಾಗಿ ಸಕ್ರಿಯವಾಗಿರಬೇಕು ಎಂಬ ನಿಯಮ ಜಾರಿಗೆ ಬರಲಿದೆ.

ಸರ್ಕಾರದ ಈ ಕ್ರಮದಿಂದ ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಚಾಲಕರಿಗೆ ಉಂಟಾಗುವ ಬೆಳಕಿನ ಕಿರಿಕಿರಿ ಕಡಿಮೆಯಾಗುವುದರ ಜೊತೆಗೆ, ರಸ್ತೆ ಸುರಕ್ಷತೆ ಹೆಚ್ಚಿಸುವ ನಿರೀಕ್ಷೆಯಿದೆ. ಕರಡು ತಿದ್ದುಪಡಿ ಕುರಿತು ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.