20 ಪ್ರಮುಖ ಬೇಡಿಕೆಗಳ ಕುರಿತು ಸಮಯಬದ್ಧ ಕಾರ್ಯಯೋಜನೆ ರೂಪಿಸಲು ಜೆಡಿಎಸ್ ಆಗ್ರಹ | ಜಾಕೆ ಮಾಧವ ಗೌಡ–ಯೋಗಿಶ್ ಶೆಟ್ಟಿ ಜಪ್ಪು ಜಂಟಿ ಹೇಳಿಕೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಬೇಡಿಕೆಗಳ ಕುರಿತು ಸರ್ಕಾರ ಸ್ಪಷ್ಟ ನಿರ್ಣಯ ಕೈಗೊಂಡು, ಅವುಗಳ ಅನುಷ್ಠಾನಕ್ಕೆ ಸಮಯಬದ್ಧ ಕಾರ್ಯಯೋಜನೆ ರೂಪಿಸಬೇಕು ಎಂದು ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಜಂಟಿಯಾಗಿ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದ ಪ್ರಮುಖ ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಕೈಗಾರಿಕಾ, ಪ್ರವಾಸೋದ್ಯಮ ಹಾಗೂ ಕರಾವಳಿ ಕೇಂದ್ರವಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅಪಾರ ಅವಕಾಶಗಳಿವೆ. ಆದರೆ ರಸ್ತೆ, ಸಂಚಾರ, ಕುಡಿಯುವ ನೀರು, ಒಳಚರಂಡಿ, ಕರಾವಳಿ ಸವೆತ, ಉದ್ಯೋಗ, ಕೃಷಿ, ಮೀನುಗಾರಿಕೆ, ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸರ್ಕಾರದ ಮುಂದೆ 20 ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗಿದ್ದು, ಪ್ರತಿಯೊಂದು ಬೇಡಿಕೆಯ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಅಗತ್ಯ ಅನುದಾನ, ಕಾರ್ಯಯೋಜನೆ ಹಾಗೂ ಅನುಷ್ಠಾನದ ಗಡುವನ್ನು ನಿಗದಿಪಡಿಸಬೇಕು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್‌ನ 20 ಪ್ರಮುಖ ಬೇಡಿಕೆಗಳು
ಮೀನುಗಾರರಿಗೆ ವಿಶೇಷ ಅಭಿವೃದ್ಧಿ ಪ್ಯಾಕೇಜ್ : ಮೀನುಗಾರಿಕಾ ಬಂದರುಗಳ ಮೂಲಸೌಕರ್ಯ ಅಭಿವೃದ್ಧಿ, ಮೀನು ಸಂಸ್ಕರಣೆ, ಶೀತಲೀಕರಣ, ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಸಾಂಪ್ರದಾಯಿಕ ಮೀನುಗಾರರಿಗೆ ಆಧುನಿಕ ತಂತ್ರಜ್ಞಾನ ಮತ್ತು ಸುರಕ್ಷತಾ ಸಾಧನಗಳನ್ನು ಒದಗಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು.
ಕರಾವಳಿ ಸವೆತಕ್ಕೆ ಶಾಶ್ವತ ಪರಿಹಾರ: ಕರಾವಳಿ ಸವೆತದ ವೈಜ್ಞಾನಿಕ ಸಮೀಕ್ಷೆ ನಡೆಸಿ, ಅಪಾಯದಲ್ಲಿರುವ ಜನವಸತಿ, ರಸ್ತೆ ಹಾಗೂ ಮೀನುಗಾರಿಕಾ ಪ್ರದೇಶಗಳಿಗೆ ಶಾಶ್ವತ ರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು.
ಮಂಗಳೂರು ನಗರಕ್ಕೆ ಸಮಗ್ರ ಸಂಚಾರ ವ್ಯವಸ್ಥೆ: ರಿಂಗ್‌ರೋಡ್ ಯೋಜನೆಗೆ ಆದ್ಯತೆ ನೀಡಿ, ಪ್ರಮುಖ ರಸ್ತೆಗಳು ಮತ್ತು ಜಂಕ್ಷನ್‌ಗಳ ಅಭಿವೃದ್ಧಿ, ಸಾರ್ವಜನಿಕ ಸಾರಿಗೆ ಹಾಗೂ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಯನ್ನು ಬಲಪಡಿಸಬೇಕು.
ಕುಡಿಯುವ ನೀರಿಗೆ ಶಾಶ್ವತ ಪರಿಹಾರ: ಜಿಲ್ಲೆಯ ಸಮಗ್ರ ಕುಡಿಯುವ ನೀರಿನ ಮಾಸ್ಟರ್ ಪ್ಲಾನ್ ರೂಪಿಸಿ, ಗ್ರಾಮೀಣ ಪ್ರದೇಶಗಳಿಗೆ ನಿರಂತರ ಪೈಪ್‌ಲೈನ್ ನೀರು ಹಾಗೂ ಜಲಮೂಲಗಳ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು.
ಒಳಚರಂಡಿ ಮತ್ತು ಮಳೆನೀರು ನಿರ್ವಹಣೆ: ಮಂಗಳೂರು ನಗರದ ಹಳೆಯ ಚರಂಡಿ ವ್ಯವಸ್ಥೆಯನ್ನು ಪುನರ್‌ನಿರ್ಮಿಸಿ, ಮಳೆನೀರು ಹರಿಯುವ ಮಾರ್ಗಗಳನ್ನು ಅಭಿವೃದ್ಧಿಪಡಿಸಿ, ಪ್ರವಾಹಪೀಡಿತ ಪ್ರದೇಶಗಳಿಗೆ ಸಮಗ್ರ Flood Management Plan ರೂಪಿಸಬೇಕು.
ರೈಲು ಸಂಪರ್ಕ ಬಲಪಡಿಸಬೇಕು: ಮಂಗಳೂರು–ಬೆಂಗಳೂರು ರೈಲು ಮಾರ್ಗದ ಸಾಮರ್ಥ್ಯ ಹೆಚ್ಚಿಸಿ, ರೈಲು ಸೇವೆ, ಹೆಚ್ಚುವರಿ ನಿಲುಗಡೆಗಳು ಹಾಗೂ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು.
ವಿಮಾನ ಸಂಪರ್ಕ ವಿಸ್ತರಣೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಮುಖ ದೇಶೀಯ ನಗರಗಳು ಹಾಗೂ ಗಲ್ಫ್ ರಾಷ್ಟ್ರಗಳು ಸೇರಿದಂತೆ ಅಂತರರಾಷ್ಟ್ರೀಯ ಸ್ಥಳಗಳಿಗೆ ಹೆಚ್ಚಿನ ವಿಮಾನ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
ಬಂದರು ಆಧಾರಿತ ಕೈಗಾರಿಕಾ ಅಭಿವೃದ್ಧಿ: ನವಮಂಗಳೂರು ಬಂದರು ಆಧಾರಿತ ಲಾಜಿಸ್ಟಿಕ್ಸ್, ವೇರ್‌ಹೌಸಿಂಗ್, ಆಹಾರ ಸಂಸ್ಕರಣೆ, ರಫ್ತು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು.
ಬಡವರು ಮತ್ತು ಮಧ್ಯಮ ವರ್ಗಕ್ಕೆ ವಸತಿ: ವಸತಿ ರಹಿತ ಅರ್ಹ ಕುಟುಂಬಗಳಿಗೆ ನಿವೇಶನ ಮತ್ತು ಮನೆ ಒದಗಿಸುವ ಯೋಜನೆಗಳನ್ನು ವೇಗಗೊಳಿಸಿ, ನಗರ ಪ್ರದೇಶಗಳಲ್ಲಿ ಕೈಗೆಟುಕುವ ದರದ ವಸತಿ ಯೋಜನೆಗಳನ್ನು ರೂಪಿಸಬೇಕು.
ದಕ್ಷಿಣ ಕನ್ನಡ ಸಮಗ್ರ ಅಭಿವೃದ್ಧಿ ಪ್ಯಾಕೇಜ್: ಆರೋಗ್ಯ, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮ, ರಸ್ತೆ ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕ ಅನುದಾನದೊಂದಿಗೆ “ದಕ್ಷಿಣ ಕನ್ನಡ ಸಮಗ್ರ ಅಭಿವೃದ್ಧಿ ಪ್ಯಾಕೇಜ್” ಘೋಷಿಸಬೇಕು.
ಆರೋಗ್ಯ ಕ್ಷೇತ್ರ ಬಲಪಡಿಸಬೇಕು: ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಕುರಿತು ಸಮಗ್ರ ಆರೋಗ್ಯ ಸಮೀಕ್ಷೆ ನಡೆಸಿ, ಅತ್ಯಾಧುನಿಕ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸುವ ಜೊತೆಗೆ ಅರ್ಹ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು.
ಮಣಿಪಾಲ–ಮಂಗಳೂರು ಶೈಕ್ಷಣಿಕ ಕಾರಿಡಾರ್: ಮಣಿಪಾಲ–ಮಂಗಳಗಂಗೋತ್ರಿ–ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶೈಕ್ಷಣಿಕ ಕಾರಿಡಾರ್ ಯೋಜನೆಯನ್ನು ಪುನರ್‌ಪರಿಶೀಲಿಸಿ ಅನುಷ್ಠಾನಗೊಳಿಸಬೇಕು.
ಸ್ಥಳೀಯ ಯುವಕರಿಗೆ ಉದ್ಯೋಗ: ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಅರ್ಹ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ತಾಲೂಕು ಮಟ್ಟದ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು.
ಅಡಿಕೆ ಬೆಳೆಗಾರರ ಸಮಸ್ಯೆ: ಹಳದಿ ರೋಗ, ಎಲೆಚುಕ್ಕಿ ರೋಗ ಸೇರಿದಂತೆ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಕೃಷಿ ವಿಜ್ಞಾನಿಗಳ ಸಹಯೋಗದಲ್ಲಿ ವೈಜ್ಞಾನಿಕ ಪರಿಹಾರ ಕಂಡುಕೊಂಡು, ಬೆಳೆ ವಿಮೆ ಹಾಗೂ ಮಾರುಕಟ್ಟೆ ಬೆಂಬಲ ಒದಗಿಸಬೇಕು.
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ: ಕಡಲತೀರ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಹಾಗೂ ನೈಸರ್ಗಿಕ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಸಮಗ್ರ ಪ್ರವಾಸೋದ್ಯಮ ಯೋಜನೆ ರೂಪಿಸಬೇಕು.
ಸಹಕಾರಿ ಕ್ಷೇತ್ರಕ್ಕೆ ಕಾಯಕಲ್ಪ: ಸಹಕಾರಿ ಕ್ಷೇತ್ರದ ಆಧುನೀಕರಣ, ಸಂಶೋಧನೆ ಮತ್ತು ತರಬೇತಿಗಾಗಿ ಮಳವಳ್ಳಿ ಶಿವರಾವ್ ಅವರ ಹೆಸರಿನಲ್ಲಿ ಸಹಕಾರಿ ಅಧ್ಯಯನ ಮತ್ತು ತಂತ್ರಜ್ಞಾನ ಸಂಸ್ಥೆ ಸ್ಥಾಪಿಸುವ ಪ್ರಸ್ತಾವನೆಯನ್ನು ಪರಿಗಣಿಸಬೇಕು.
ಮೂಡುಬಿದಿರೆ ಕೈಗಾರಿಕಾ ಮತ್ತು ಟೆಕ್ಸ್ಟೈಲ್ ಪಾರ್ಕ್: ಮೂಡುಬಿದಿರೆಯ ಇಂಡಸ್ಟ್ರಿಯಲ್ ಪಾರ್ಕ್ ಹಾಗೂ ಟೆಕ್ಸ್ಟೈಲ್ ಪಾರ್ಕ್‌ಗಳನ್ನು ಪುನಶ್ಚೇತನಗೊಳಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು.
ಕೆಂಪುಕಲ್ಲು ಮತ್ತು ಮರಳು ಸಮಸ್ಯೆ: ನಿರ್ಮಾಣ ಕ್ಷೇತ್ರಕ್ಕೆ ಅಗತ್ಯವಿರುವ ಕೆಂಪುಕಲ್ಲು ಮತ್ತು ಮರಳಿನ ಲಭ್ಯತೆ, ಸಾಗಾಟ ಹಾಗೂ ಅನುಮತಿ ಪ್ರಕ್ರಿಯೆಯ ಸಮಸ್ಯೆಗಳಿಗೆ ಕಾನೂನುಬದ್ಧ, ಪಾರದರ್ಶಕ ಮತ್ತು ಸರಳ ವ್ಯವಸ್ಥೆ ರೂಪಿಸಬೇಕು.
ಗ್ರಾಮೀಣ ರಸ್ತೆ ಮತ್ತು ಸೇತುವೆ ಅಭಿವೃದ್ಧಿ: ಶಿಥಿಲಗೊಂಡ ಸೇತುವೆಗಳು ಹಾಗೂ ಅಪಾಯಕಾರಿ ರಸ್ತೆಗಳನ್ನು ಗುರುತಿಸಿ ತ್ವರಿತ ದುರಸ್ತಿ ಕೈಗೊಳ್ಳಬೇಕು. ಗ್ರಾಮೀಣ ಸಂಪರ್ಕ ರಸ್ತೆಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ ಒದಗಿಸಬೇಕು.
ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ: ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಡಿಜಿಟಲ್ ತರಗತಿ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಸೌಲಭ್ಯ, ವಿದ್ಯಾರ್ಥಿ ವಸತಿ ನಿಲಯ ಹಾಗೂ ಇತರ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು.
“ಚರ್ಚೆ ಮಾತ್ರವಲ್ಲ, ನಿರ್ಣಯವೂ ಅಗತ್ಯ”
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶವಾಗಿದೆ. ಆದ್ದರಿಂದ ಜಿಲ್ಲೆಯ ಬೇಡಿಕೆಗಳ ಕುರಿತು ಕೇವಲ ಚರ್ಚೆ ನಡೆಸುವುದಕ್ಕೆ ಸೀಮಿತವಾಗದೆ, ಸಚಿವ ಸಂಪುಟ ಸಭೆಯಲ್ಲೇ ಸ್ಪಷ್ಟ ನಿರ್ಣಯ ಕೈಗೊಂಡು, ಅಗತ್ಯ ಅನುದಾನ, ಯೋಜನೆ ಮತ್ತು ಅನುಷ್ಠಾನದ ಗಡುವು ನಿಗದಿಪಡಿಸಬೇಕು ಎಂದು ಜಾಕೆ ಮಾಧವ ಗೌಡ ಮತ್ತು ಯೋಗಿಶ್ ಶೆಟ್ಟಿ ಜಪ್ಪು ಒತ್ತಾಯಿಸಿದ್ದಾರೆ.
“ದಕ್ಷಿಣ ಕನ್ನಡ 2040” ದೃಷ್ಟಿಪತ್ರ ಸಿದ್ಧಪಡಿಸಲಿ”
ಮುಂದಿನ 20 ವರ್ಷಗಳ ಜಿಲ್ಲೆಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು “ದಕ್ಷಿಣ ಕನ್ನಡ 2040 – ಸಮಗ್ರ ಅಭಿವೃದ್ಧಿ ದೃಷ್ಟಿಪತ್ರ” ಸಿದ್ಧಪಡಿಸಬೇಕು. ಆರೋಗ್ಯ, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮ, ರಸ್ತೆ, ರೈಲು, ಬಂದರು, ವಿಮಾನ ಸಂಪರ್ಕ, ಕುಡಿಯುವ ನೀರು, ಒಳಚರಂಡಿ, ವಸತಿ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ದೀರ್ಘಾವಧಿ ಹಾಗೂ ಹಂತವಾರು ಯೋಜನೆಗಳನ್ನು ರೂಪಿಸಬೇಕು ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೇ ಜಿಲ್ಲೆಯ ಪ್ರಮುಖ ಬೇಡಿಕೆಗಳ ಕುರಿತು ನಿರ್ಣಯ ಕೈಗೊಂಡು, ಅಗತ್ಯ ಘೋಷಣೆಗಳನ್ನು ಮಾಡಬೇಕು. ಸರ್ಕಾರದಿಂದ ಸಮರ್ಪಕ ಸ್ಪಂದನೆ ದೊರೆಯದಿದ್ದಲ್ಲಿ, ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜನರ ಪರವಾಗಿ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟವನ್ನು ಹಂತ ಹಂತವಾಗಿ ಮುಂದುವರಿಸಲಿದೆ ಎಂದು ಜಾಕೆ ಮಾಧವ ಗೌಡ ಮತ್ತು ಯೋಗಿಶ್ ಶೆಟ್ಟಿ ಜಪ್ಪು ಜಂಟಿಯಾಗಿ ತಿಳಿಸಿದ್ದಾರೆ.
ಜಾಕೆ ಮಾಧವ ಗೌಡ
ಜಿಲ್ಲಾಧ್ಯಕ್ಷರು
ಜನತಾದಳ (ಜಾತ್ಯತೀತ), ದಕ್ಷಿಣ ಕನ್ನಡ
ಯೋಗಿಶ್ ಶೆಟ್ಟಿ ಜಪ್ಪು
ಮಹಾ ಪ್ರಧಾನ ಕಾರ್ಯದರ್ಶಿ
ಜನತಾದಳ (ಜಾತ್ಯತೀತ), ದಕ್ಷಿಣ ಕನ್ನಡ

