ಬೆಂಗಳೂರಿನಲ್ಲಿ ಸೆಪ್ಟೆಂಬರ್ 8 ರಂದು ‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ–2026’ ಪ್ರಶಸ್ತಿ ಪ್ರದಾನ ಸಮಾರಂಭವು ಅರ್ಥಪೂರ್ಣವಾಗಿ ಜರುಗಿತು. ಇದೇ ವೇಳೆ ‘ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್’ ಹಾಗೂ ‘ಬೆಂಗಳೂರು ಹೆಲ್ತ್ ಫೌಂಡೇಶನ್’ ಅಧಿಕೃತವಾಗಿ ಉದ್ಘಾಟನೆಗೊಂಡವು. ಆರೋಗ್ಯದ ಅರಿವು ಕೇವಲ ವೈದ್ಯರ ಕೊಠಡಿಗೆ ಸೀಮಿತವಾಗದೆ ಪ್ರತಿಯೊಂದು ಮನೆಯನ್ನು ತಲುಪಬೇಕು ಮತ್ತು ಸಾಹಿತ್ಯದ ಮೂಲಕ ವೈಜ್ಞಾನಿಕ ಅರಿವು ಮೂಡಿಸಬೇಕು ಎಂಬುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವ್ಯವಸ್ಥಾಪಕ ಎನ್. ಸುಬ್ರಹ್ಮಣ್ಯ ಭಟ್, ಸಾಹಿತಿಗಳು ಹಾಗೂ ವೈದ್ಯರನ್ನು ಒಂದೇ ವೇದಿಕೆಗೆ ತಂದಿರುವುದನ್ನು ಶ್ಲಾಘಿಸಿದರು. ಡಾ. ಆಶಾಕಿರಣ್ ಪರಿಷತ್ ಹಾಗೂ ಫೌಂಡೇಶನ್‌ಗೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ವಸುಂಧರಾ ಭೂಪತಿ, ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಆರೋಗ್ಯ ಜಾಗೃತಿಗೆ ಬಳಸಿಕೊಳ್ಳಬೇಕು ಹಾಗೂ ಪುಸ್ತಕ ಖರೀದಿಗೆ ಬಜೆಟ್ ಮೀಸಲಿಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ವಿಶೇಷ ಉಪನ್ಯಾಸ ನೀಡಿದ ಡಾ. ಸುರೇಶ್ ನೆಗಳಗುಳಿ, ಆನ್‌ಲೈನ್‌ನಲ್ಲಿ ಲಕ್ಷಣಗಳನ್ನು ಹುಡುಕಿ ಸ್ವಯಂ ರೋಗನಿರ್ಣಯ ಮಾಡಿಕೊಳ್ಳುವುದನ್ನು ಬಿಟ್ಟು ವೈದ್ಯರ ಸಲಹೆ ಪಡೆಯುವಂತೆ ತಿಳಿಸಿದರು.

ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ಡಾ. ಸುರೇಶ್ ನೆಗಳಗುಳಿ, ಡಾ. ವಸುಂಧರಾ ಭೂಪತಿ ಹಾಗೂ ಎನ್.ವಿ. ರಮೇಶ್ ಅವರಿಗೆ ‘ಆರೋಗ್ಯ ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 500 ಸ್ಪರ್ಧಿಗಳು ಪಾಲ್ಗೊಂಡಿದ್ದು, ವೈದ್ಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿ ವಿಭಾಗಗಳ ಕಥೆ ಮತ್ತು ಕವನ ಸ್ಪರ್ಧೆಗಳಲ್ಲಿ ವಿಜೇತರಾದ ಡಾ. ನವೀನ್ ಎಲ್ಲಂಗಳ, ಎಸ್. ರಘುನಂದನ್, ಡಾ. ಭವ್ಯ ಎಲ್, ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮತ್ತಿತರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈದ್ಯಲೋಕ ಮತ್ತು ಹೆಲ್ತ್‌ವಿಷನ್ ಸಂಪಾದಕ ಶ್ರೀಕೃಷ್ಣ ಮಾಯ್ಲೆಂಗಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣವೇ ಈ ಸಂಸ್ಥೆಗಳ ಮುಖ್ಯ ಗುರಿ ಎಂದು ಅಭಿಪ್ರಾಯಪಟ್ಟರು.
ವರದಿ : ಮಂದಾರ ರಾಜೇಶ್ ಭಟ್

