ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಪರಮ ಭಕ್ತ, ನಡೆ-ನುಡಿಯ ಸರಳತೆಯ ಸಾಕಾರ ಮೂರ್ತಿ ಹಾಗೂ ‘ಅಜಾತಶತ್ರು’ ಎಂದೇ ಖ್ಯಾತರಾಗಿದ್ದ ಕಟೀಲು ಪಾಂಡುರಂಗ ಸಪ್ರೆ (ಪಾಂಡಣ್ಣ) ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆ ಕಟೀಲು ಕ್ಷೇತ್ರ ಮತ್ತು ಕರಾಡ ಬ್ರಾಹ್ಮಣ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಹಲವು ದಶಕಗಳ ಕಾಲ ಕಟೀಲು ದೇವಸ್ಥಾನದ ಕಚೇರಿಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಇವರು, ನಿವೃತ್ತಿಯ ನಂತರವೂ ದೇವಿಯ ಸೇವೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೂಡುಬಿದಿರೆ ಸಮೀಪದ ಶ್ರೀನಿವಾಸಪುರ ಗುಂಡಿಡ್ಕದ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದ ಮುಖ್ಯಸ್ಥರಾಗಿ, ಆರಾಧ್ಯ ಭಕ್ತರಾಗಿ ದೇವಸ್ಥಾನವನ್ನು ಮುನ್ನಡೆಸುತ್ತಿದ್ದರು.
ಪ್ರತಿಷ್ಠಿತ ಸಪ್ರೆ ಮನೆತನದವರಾಗಿದ್ದ ಇವರು ಜೀವನದಲ್ಲಿ ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳದೆ, ಎಲ್ಲರನ್ನೂ ಪ್ರೀತಿಯಿಂದ ಗೆದ್ದ ಮಹಾನುಭಾವರಿವರು. ಸದಾ ಮಂದಹಾಸದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ ಪಾಂಡಣ್ಣನವರ ಸೇವಾ ಮನೋಭಾವ ಮತ್ತು ಸೌಮ್ಯ ಸ್ವಭಾವ ಸದಾ ಸ್ಮರಣೀಯ.
ಮೃತರ ಅಂತಿಮ ದರ್ಶನಕ್ಕೆ ಗುಂಡ್ಯಡ್ಕ ಸಮೀಪದ ಸಪ್ರೆ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಕರುಣಿಸಲಿ ಎಂದು ಪ್ರಾರ್ಥಿಸೋಣ.
“ದೇವಿಯ ಸೇವೆಯಲ್ಲೇ ಬದುಕನ್ನು ಸಾರ್ಥಕಗೊಳಿಸಿದ ಪುಣ್ಯಾತ್ಮ, ಅಜಾತಶತ್ರು ಪಾಂಡಣ್ಣನವರ ಸೌಮ್ಯ ಮುಖ ಇನ್ನು ನೆನಪು ಮಾತ್ರ. ದೇವರ ಪಾದ ಸೇರಿದ ಕರುಣಾಮಯಿಗೆ ಭಾಷ್ಪಾಂಜಲಿ.”

