ಮಂಗಳೂರು : ಉರ್ವ ಶೇಡಿಗುರಿ ಪ್ರದೇಶದಲ್ಲಿ ನಡೆಯುತ್ತಿರುವ ಬಹುಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ ಪಕ್ಕದ ಮನೆಯ ಕಂಪೌಂಡ್ ಕುಸಿದು ಅಪಾಯಕರ ಪರಿಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ನಡುವೆಯೇ ಈ ಘಟನೆ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿತು.

ಸಂತ್ರಸ್ತ ಮನೆಯವರು ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಅವರು ಪರಿಸ್ಥಿತಿಯನ್ನು ಪರಿಶೀಲಿಸಿ ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಕಟ್ಟಡ ನಿರ್ಮಾಣದ ಮಾಲೀಕರು ಹಾಗೂ ಗುತ್ತಿಗೆದಾರರೊಂದಿಗೆ ತುರ್ತು ಚರ್ಚೆ ನಡೆಸಿ, ಅಪಾಯದಲ್ಲಿದ್ದ ಕುಟುಂಬದ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಳೆ ಮುಂದುವರಿದಿರುವ ಹಿನ್ನೆಲೆ ಮನೆ ಮತ್ತಷ್ಟು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ, ಕುಟುಂಬದವರನ್ನು ಮುಂಜಾಗ್ರತಾ ಕ್ರಮವಾಗಿ ಸಮೀಪದ ಹೋಟೆಲಿಗೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಅಲ್ಲದೆ ಮನೆಗೆ ಯಾವುದೇ ಹಾನಿಯಾಗದಂತೆ ತಾತ್ಕಾಲಿಕ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯೋಗಿಶ್ ಶೆಟ್ಟಿ ಜಪ್ಪು ಅವರು, “ಜನರ ಜೀವ ಭದ್ರತೆ ಅತ್ಯಂತ ಮುಖ್ಯ. ಕಟ್ಟಡ ಕಾಮಗಾರಿಗಳು ನಡೆಯುವ ಸಂದರ್ಭಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಳೆಗಾಲದಲ್ಲಿ ನಿರ್ಲಕ್ಷ್ಯದಿಂದ ನಡೆಯುವ ಕಾಮಗಾರಿಗಳು ಸಾರ್ವಜನಿಕರಿಗೆ ಅಪಾಯ ಉಂಟುಮಾಡಬಾರದು. ಮನೆಗೆ ಹಾನಿಯಾಗಿರುವ ಕುಟುಂಬಕ್ಕೆ ನ್ಯಾಯ ಸಿಗುವಂತೆ ಹಾಗೂ ಸೂಕ್ತ ಪರಿಹಾರ ದೊರೆಯುವಂತೆ ನಾವು ಮುಂದೆಯೂ ಗಮನ ಹರಿಸುತ್ತೇವೆ,” ಎಂದು ಹೇಳಿದರು. ಗೈಟನ್ , ಫೇರಿ, ರೋಶನ್, ರೋಹನ್ ಮುಂತಾದವರು ಯೋಗಿಶ್ ಶೆಟ್ಟಿ ಜಪ್ಪುರವರ ಜೊತೆ ಇದ್ದರು.

