
ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಯುವ ವೃಕ್ಷೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿನೂತನ ಹಾಗೂ ಸೃಜನಾತ್ಮಕ ರೀತಿಯಲ್ಲಿ ಆಚರಿಸಲಾಯಿತು.
ಶಾಲೆಯಲ್ಲಿ ಆಯೋಜಿಸಲಾದ “ಸೃಜನೋತ್ಸವ 2026 ” ರ ಕಾರ್ಯಕ್ರಮದ ಅಂಗವಾಗಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಉದ್ದೇಶದಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಯುವವಾಹಿನಿಯ ಪದಾಧಿಕಾರಿಗಳು ಸೇರಿ ಮರದ ಆಕೃತಿಯನ್ನು ರಚಿಸಿ, ಅದಕ್ಕೆ ವಿವಿಧ ಬಣ್ಣಗಳ ಮೂಲಕ ತಮ್ಮ ಕೈಬೆರಳಿನ ಅಚ್ಚುಗಳನ್ನು ನೀಡಿ ಸುಂದರವಾದ ವೃಕ್ಷದ ರೂಪವನ್ನು ಮೂಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯುವವಾಹಿನಿ (ರಿ.) ಮಾಣಿ ಘಟಕ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ ಮರಗಳನ್ನು ನೆಡುವುದು ಮಾತ್ರವಲ್ಲ, ಪ್ರಕೃತಿಯ ಮೇಲಿನ ಪ್ರೀತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದೇ ನಿಜವಾದ ವೃಕ್ಷೋತ್ಸವ. ಎಂದರು.
ಪ್ರಕೃತಿ ಮತ್ತು ಸೃಜನಶೀಲತೆಯ ಸಂಗಮವಾಗಿದ್ದ ಈ ವಿನೂತನ ಚಟುವಟಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಅದರೊಂದಿಗೆ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಪೋಷಣೆ ಮತ್ತು ಪರಿಸರದ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. “ಒಂದು ಗಿಡ – ಒಂದು ಜೀವ” ಎಂಬ ಸಂದೇಶದೊಂದಿಗೆ ಹಸಿರು ಪರಿಸರ ನಿರ್ಮಾಣದ ಸಂಕಲ್ಪವನ್ನು ಎಲ್ಲರೂ ಕೈಗೊಂಡರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಮಕ್ಕಳ ಪೋಷಕರು ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಯುವವಾಹಿನಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು

