ಶುದ್ಧ ಗಾಳಿ, ನೀರು ಮತ್ತು ಬೆಳಕಿಗಾಗಿ ಗಿಡ ನೆಡುವ ಸಂಕಲ್ಪ

0
3

ಕಾರ್ಕಳ: “ನಮ್ಮ ಬದುಕಿಗೆ ಶುದ್ಧ ಗಾಳಿ, ನೀರು ಮತ್ತು ಬೆಳಕು ತೀರಾ ಅವಶ್ಯ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ,” ಎಂದು ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೊ. ಶ್ರೀಧರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ಮಿಯಾರು ಮುರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ‘ಧನ್ಯವಾದ್–ವೃಕ್ಷ ಸಂವರ್ಧನಾ ಯೋಜನೆ’ಯಡಿ 100ಕ್ಕೂ ಅಧಿಕ ವಿವಿಧ ಪ್ರಭೇದಗಳ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರದ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸುವ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಮಾರ್ಗದರ್ಶಕರೂ, ‘ಧನ್ಯವಾದ್–ವೃಕ್ಷ ಸಂವರ್ಧನಾ ಯೋಜನೆ’ಯ ರೋಟರಿ ಜಿಲ್ಲಾ ಅಧ್ಯಕ್ಷರೂ ಆಗಿರುವ ಮಾಜಿ ಜಿಲ್ಲಾ ಗವರ್ನರ್ ರೊ. ಡಾ. ಭರತೇಶ್ ಆದಿರಾಜ್ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆ ರೋಟರಿಯ ಧ್ಯೇಯೋದ್ದೇಶಗಳಲ್ಲಿ ಪರಿಸರ ಸಂರಕ್ಷಣೆಯೂ ಪ್ರಮುಖವಾದದ್ದು. ಈ ಹಿನ್ನೆಲೆಯಲ್ಲಿ ಕೈಗೊಂಡಿರುವ ‘ಧನ್ಯವಾದ್’ ವೃಕ್ಷ ಸಂವರ್ಧನಾ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ರೊ. ಮಂಜುನಾಥ ಹೆಗ್ಡೆ ಗಣ್ಯರನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಶ್ರೀ ಮಲ್ಲಿಕಾರ್ಜುನ ಕುರಿಯವರು ಮಾತನಾಡಿ, ರೋಟರಿ ಸಂಸ್ಥೆಯ ಪರಿಸರಪರ ಚಟುವಟಿಕೆಗಳ ಬಗ್ಗೆ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿ, ಇಂತಹ ಮಹತ್ವದ ಯೋಜನೆಯಲ್ಲಿ ತಮ್ಮ ಸಂಸ್ಥೆಯನ್ನು ತೊಡಗಿಸಿಕೊಂಡಿದ್ದಕ್ಕಾಗಿ ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಕಾಲೇಜಿನ ವಿದ್ಯಾರ್ಥಿನಿಯರು ‘ವಂದೇ ಮಾತರಂ’ ಹಾಗೂ ರಾಷ್ಟ್ರೀಯ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಬಳಿಕ ಅತಿಥಿಗಳು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪನ್ಯಾಸಕ ವೃಂದದ ಮೇಲ್ವಿಚಾರಣೆ ಹಾಗೂ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ವಿವಿಧ ಪ್ರಭೇದಗಳ ಸಸಿಗಳನ್ನು ನೆಟ್ಟರು.

ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ರೊ. ಸುರೇಂದ್ರ ನಾಯಕ್, ಪೂರ್ವ ಅಧ್ಯಕ್ಷರಾದ ರೊ. ಸುರೇಶ್ ನಾಯಕ್ ಹಾಗೂ ರೊ. ಉಪೇಂದ್ರ ವಾಗ್ಲೆ, ಕೋಶಾಧಿಕಾರಿ ರೊ. ಪ್ರಶಾಂತ್ ಜೈನ್, ರೊ. ರಮೇಶ್ ಶೆಟ್ಟಿ, ಆನ್ಸ್ ಅಧ್ಯಕ್ಷೆ ಶರ್ಮಿಳಾ ಶೆಟ್ಟಿ, ಆನೆಟ್ ಸೃಷ್ಟಿ ಆರ್. ಶೆಟ್ಟಿ, ರೊ. ಫೆಲಿಕ್ಸ್ ವಾಜ್, ರೊ. ಅಬ್ದುಲ್ ರಹೆಮಾನ್, ರೊ. ಪ್ರಕಾಶ್ ವಾಗ್ಲೆ ಮತ್ತಿತರರು ಉಪಸ್ಥಿತರಿದ್ದರು.

ರೊ. ಸುಜಯ್ ಅವರು ತಮ್ಮ ಜೆಸಿಬಿ ಮೂಲಕ ಸಸಿಗಳನ್ನು ನೆಡಲು ಅಗತ್ಯವಿರುವ ಕಾಮಗಾರಿ ವ್ಯವಸ್ಥೆ ಮಾಡಿಕೊಟ್ಟಿದ್ದು, ಅವರ ಕೊಡುಗೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕಾಲೇಜಿನ ಉಪನ್ಯಾಸಕಿ ಹಾಗೂ ನಿಲಯ ಪಾಲಕರಾದ ಡಾ. ತುಲಸೀ ಗಾಯತ್ರಿ ದೇವಿ, ಉಪನ್ಯಾಸಕರಾದ ಶ್ರೀ ಗುರುರಾಜ್, ಶ್ರೀ ಪ್ರವೀಣ್, ಶ್ರೀಮತಿ ಸುಪ್ರೀತಾ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ದೊರೆತು, ವೃಕ್ಷಾರೋಪಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ರೋಟರಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ವಿಶ್ರಾಂತ ಪ್ರಾಂಶುಪಾಲ ರೊ. ಗಣೇಶ್ ಬರ್ಲಾಯ ವಂದಿಸಿದರು.