ಬೆಂಗಳೂರು : ರಾಜ್ಯದಲ್ಲಿ ಅಕ್ಕಿ ದರ ಮತ್ತೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸತತ ನಾಲ್ಕು ತಿಂಗಳಲ್ಲಿ ನಾಲ್ಕನೇ ಬಾರಿಗೆ ಅಕ್ಕಿ ದರ ಹೆಚ್ಚಳವಾಗಿರುವುದರಿಂದ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳುವಂತಾಗಿದೆ.
ಕೋಲಂ ಅಕ್ಕಿಯ ದರ ಕೆ.ಜಿ.ಗೆ ₹75ರಿಂದ ₹110ಕ್ಕೆ ಏರಿಕೆಯಾಗಿದೆ. ಬಾಸುಮತಿ ಅಕ್ಕಿ ₹105ರಿಂದ ₹120ಕ್ಕೆ, ಜೀರಾ ರೈಸ್ ₹115ರಿಂದ ₹125ಕ್ಕೆ ಹಾಗೂ ರಾಜಮುಡಿ ಅಕ್ಕಿ ₹125ರಿಂದ ₹150ಕ್ಕೆ ಹೆಚ್ಚಳವಾಗಿದೆ. ಸ್ಟೀಮ್ ಅಕ್ಕಿಯ ದರವೂ ಕೆ.ಜಿ.ಗೆ ₹60ರಿಂದ ₹88ಕ್ಕೆ ಏರಿಕೆಯಾಗಿದೆ.
ಸೋನಾ ಮಸೂರಿ ಅಕ್ಕಿಯ ದರವೂ ಗಣನೀಯವಾಗಿ ಹೆಚ್ಚಳವಾಗಿದ್ದು, ಕೆ.ಜಿ.ಗೆ ₹100ರ ಗಡಿ ತಲುಪಿದೆ. ಚೀಲದ ದರದಲ್ಲಿ ಸುಮಾರು ₹400ರಷ್ಟು ಹೆಚ್ಚಳವಾಗಿದೆ. ಕಳೆದ ಎರಡು ತಿಂಗಳಲ್ಲಿ ಸೋನಾ ಮಸೂರಿ ಅಕ್ಕಿಯ ದರದಲ್ಲಿ ₹390ರಿಂದ ₹400ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ಕೆ.ಜಿ.ಗೆ ಸುಮಾರು ₹90ರಷ್ಟಾಗಿದೆ.
ಬೇಡಿಕೆಗೆ ಅನುಗುಣವಾಗಿ ಅಕ್ಕಿಯ ಪೂರೈಕೆ ಆಗದಿರುವುದೇ ಸತತ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ರಾಯಚೂರು, ಸಿಂಧನೂರು, ಸಿರಗುಪ್ಪ ಹಾಗೂ ಭದ್ರಾವತಿ ಭಾಗಗಳಲ್ಲಿ ಭತ್ತದ ಉತ್ಪಾದನೆ ಕುಸಿದಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಭತ್ತದ ಇಳುವರಿ ಕುಸಿತವಾಗಿರುವುದರಿಂದ ಅಕ್ಕಿಗೆ ಬೇಡಿಕೆ ಹೆಚ್ಚಾಗಿದೆ.
ಸತತ ದರ ಏರಿಕೆಯಿಂದ ಅಕ್ಕಿ ಖರೀದಿಸಲು ಮಾರುಕಟ್ಟೆಗೆ ಬರುವ ಗ್ರಾಹಕರು ದರ ಕೇಳಿ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

