ನವದೆಹಲಿ : ಆಗಸ್ಟ್ 12, 2026ರಂದು ಅಪರೂಪದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದ್ದು, ಉತ್ತರ ಗೋಳಾರ್ಧದ ಹಲವು ಪ್ರದೇಶಗಳಲ್ಲಿ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಬಾರಿ ಸಂಪೂರ್ಣ ಸೂರ್ಯಗ್ರಹಣವು ರಷ್ಯಾದ ಉತ್ತರ ಭಾಗ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಉತ್ತರ ಸ್ಪೇನ್ ಹಾಗೂ ಪೋರ್ಚುಗಲ್‌ನ ಈಶಾನ್ಯ ಭಾಗದ ಸಣ್ಣ ಪ್ರದೇಶದಲ್ಲಿ ಗೋಚರಿಸಲಿದೆ.
ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ನೇರವಾಗಿ ಹಾದುಹೋಗುವಾಗ ಸೂರ್ಯನ ಸಂಪೂರ್ಣ ಮುಖವನ್ನು ಚಂದ್ರನು ಆವರಿಸುವುದರಿಂದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಕೆಲ ಪ್ರದೇಶಗಳಲ್ಲಿ ಹಗಲಿನಲ್ಲಿಯೇ ಕೆಲಕಾಲ ಕತ್ತಲು ಆವರಿಸಲಿದ್ದು, ಸೂರ್ಯನ ಹೊರವಲಯವಾದ ಕೊರೋನಾ ಸಹ ಗೋಚರಿಸಲಿದೆ.
ಸ್ಪೇನ್‌ನ ಕೆಲವು ನಗರಗಳಲ್ಲಿ ಸೂರ್ಯ ಅಸ್ತಮಿಸುವ ಮುನ್ನವೇ ಸಂಪೂರ್ಣ ಗ್ರಹಣ ಸಂಭವಿಸುವುದರಿಂದ ಇದನ್ನು ‘ಸನ್‌ಸೆಟ್ ಎಕ್ಲಿಪ್ಸ್’ ಎಂದೂ ಕರೆಯಲಾಗುತ್ತಿದೆ. ರಷ್ಯಾದ ಉತ್ತರ ಭಾಗದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಸಂಪೂರ್ಣ ಗ್ರಹಣ ಕಾಣಿಸಿಕೊಳ್ಳಲಿದ್ದು, ಐಸ್‌ಲ್ಯಾಂಡ್ ಹಾಗೂ ಗ್ರೀನ್‌ಲ್ಯಾಂಡ್‌ನಲ್ಲಿ ಸಂಜೆ ವೇಳೆಯಲ್ಲಿ ಗ್ರಹಣ ಸಂಭವಿಸಲಿದೆ.
ಆಗಸ್ಟ್ 12ರಂದು ಸಂಭವಿಸುವ ಈ ಸಂಪೂರ್ಣ ಸೂರ್ಯಗ್ರಹಣ ಭಾರತದಿಂದ ಗೋಚರಿಸುವುದಿಲ್ಲ. ಆದರೆ ಉತ್ತರ ಅಮೆರಿಕ, ಯುರೋಪ್‌ನ ಹಲವು ಭಾಗಗಳು ಹಾಗೂ ಉತ್ತರ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ.
ಸೂರ್ಯಗ್ರಹಣವನ್ನು ವೀಕ್ಷಿಸುವಾಗ ನೇರವಾಗಿ ಸೂರ್ಯನತ್ತ ನೋಡುವುದು ಅಪಾಯಕಾರಿ. ಸಂಪೂರ್ಣ ಗ್ರಹಣದ ಕ್ಷಣಗಳನ್ನು ಹೊರತುಪಡಿಸಿ, ಸುರಕ್ಷಿತ ಸೌರ ವೀಕ್ಷಣಾ ಕನ್ನಡಕ ಅಥವಾ ಸೂಕ್ತ ಸೌರ ಫಿಲ್ಟರ್ ಬಳಸುವುದು ಅಗತ್ಯ.

