ದ.ಕ.ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೈದಿಗಳ ಬಾಳಿಗೆ ಹೊಸ ಚೈತನ್ಯ!

ವರದಿ:- ಮಂದಾರ ರಾಜೇಶ್ ಭಟ್
ಕಾನೂನು ಎಂಬುದು ಕೇವಲ ಶಿಕ್ಷಿಸುವ ಅಸ್ತ್ರವಾಗಬಾರದು, ಅದು ದಾರಿ ತಪ್ಪಿದವರಿಗೆ ದಾರಿದೀಪವೂ ಆಗಬೇಕು. ಈ ಸದಾಶಯದೊಂದಿಗೆ ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜೈಲು ಗೋಡೆಗಳ ಒಳಗೆ ಬಂಧಿಯಾಗಿರುವ ಅಸಹಾಯಕ ಕೈದಿಗಳಿಗಾಗಿ ‘ಕಾನೂನು ನೆರವು ಸಹಾಯ ಕೇಂದ್ರ’ ಎಂಬ ಹೊಸ ಆಶಾಕಿರಣವನ್ನು ಮೂಡಿಸಿದೆ.
ಜೈಲಿನ ಕತ್ತಲಲ್ಲಿ ಕಾನೂನು ಅರಿವಿಲ್ಲದೆ ಕೊರಗುತ್ತಿರುವವರಿಗೆ ಈ ಕೇಂದ್ರವು ನ್ಯಾಯದ ಬೆಳಕನ್ನು ನೀಡುವ ಭರವಸೆ ಮೂಡಿಸಿದೆ.
ಮಾನವೀಯ ಹೆಜ್ಜೆ – ಉದ್ಘಾಟನೆ
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಶ್ರೀ ಬಸವರಾಜ ಅವರು ಈ ಸಹಾಯ ಕೇಂದ್ರಕ್ಕೆ ಚಾಲನೆ ನೀಡಿದರು.
ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಕಾನೂನಿನ ಸುಳಿಗೆ ಸಿಲುಕಿದವರು ಹಾಗೂ ಅವರ ಕುಟುಂಬದವರು ಆರ್ಥಿಕ ಅಸಹಾಯಕತೆಯಿಂದ ನ್ಯಾಯದಿಂದ ವಂಚಿತರಾಗಬಾರದು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಕೇಂದ್ರವು ಕೇವಲ ಕಚೇರಿಯಾಗಿರದೆ, ಕೈದಿಗಳ ಪಾಲಿಗೆ ಸಂಕಷ್ಟ ನಿವಾರಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಪ್ರಸ್ತಾವಿಕ ನುಡಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ನ್ಯಾಯಾಧೀಶರಾದ ಶ್ರೀಮತಿ ಜೈಬುನ್ನಿಸ ಮಾತನಾಡಿ ಬಡತನದ ಕಾರಣದಿಂದ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಕೈದಿಗಳಿಗೆ ಪ್ರಾಧಿಕಾರದಿಂದ ನೇಮಕಗೊಂಡ ನುರಿತ ವಕೀಲರು ಉಚಿತವಾಗಿ ಕಾನೂನು ಸಲಹೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ನೆರವಾಗಲಿದ್ದಾರೆ.
ಜೈಲಿನಲ್ಲಿರುವವರ ಸ್ಥಿತಿಗತಿ ತಿಳಿಯದೆ ಕಂಗಾಲಾಗುವ ಕುಟುಂಬದವರಿಗೆ ಈ ಕೇಂದ್ರವು ಮಾರ್ಗದರ್ಶನ ನೀಡುತ್ತದೆ. ಅಲ್ಲದೆ, ವಾರದಲ್ಲಿ ಎರಡು ಬಾರಿ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸುವ ಮೂಲಕ ಮಾನವೀಯ ಸಂಬಂಧಗಳನ್ನು ಉಳಿಸುವ ಕೆಲಸ ಮಾಡುತ್ತದೆ.ಕುಟುಂಬದೊಂದಿಗೆ ಬೆಸುಗೆ ನೀಡಲಿದೆ ಎಂದರು.
ಜಾಮೀನು ಪಡೆಯುವ ವಿಧಾನ, ಪ್ರಕರಣದ ಪ್ರಸ್ತುತ ಸ್ಥಿತಿ ಹಾಗೂ ಕಾನೂನಿನ ಸಂಕೀರ್ಣತೆಗಳ ಬಗ್ಗೆ ಸರಳವಾಗಿ ಮಾಹಿತಿ ನೀಡಲು ವಕೀಲರನ್ನು ಇಲ್ಲಿ ನಿಯೋಜಿಸಲಾಗಿದೆ.
ಈ ಕೇಂದ್ರವು ಪ್ರತಿದಿನ ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸಲಿದೆ. ಬೆಳಿಗ್ಗೆ 11:00 ರಿಂದ 1:00 ರವರೆಗೆ ಮತ್ತು ಸಂಜೆ 4:00 ರಿಂದ 5:30 ರವರೆಗೆ ವಕೀಲರು ಲಭ್ಯವಿದ್ದು, ಕೈದಿಗಳ ಮತ್ತು ಅವರ ಸಂಬಂಧಿಕರ ಸಂಶಯಗಳನ್ನು ನಿವಾರಿಸಲಿದ್ದಾರೆ. ಎಂಬ ಮಾಹಿತಿಯನ್ನು ಸದಸ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದರು
ಗಂಭೀರ ಅಪರಾಧಗಳನ್ನು ಕೊಲೆ, ಅತ್ಯಾಚಾರ, ಪೋಕ್ಸೊ ಮುಂತಾದವುಗಳ ಹೊರತುಪಡಿಸಿ ಉಳಿದ ಪ್ರಕರಣಗಳ ಆರೋಪಿಗಳು ಈ ಸೌಲಭ್ಯದ ಲಾಭ ಪಡೆಯಬಹುದಾಗಿದೆ ಎಂಬ ಮಾಹಿತಿಯನ್ನು ನೀಡಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಈ ವಿನೂತನ ಪ್ರಯತ್ನವು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.
ಜೈಲು ಎಂಬುದು ಕೇವಲ ದಂಡನೆಯ ಕೇಂದ್ರವಾಗದೆ, ಸುಧಾರಣೆಯ ತಾಣವಾಗಬೇಕು ಎಂಬ ತತ್ವಕ್ಕೆ ಈ ‘ಕಾನೂನು ನೆರವು ಕೇಂದ್ರ’ ಪೂರಕವಾಗಿದೆ.
ಸರಿಯಾದ ಸಮಯದಲ್ಲಿ ಸಿಗುವ ಕಾನೂನು ಸಲಹೆಯು ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಿಸಬಲ್ಲದು ಎಂಬುದು ಕಾನೂನು ಸೇವೆಗಳ ಪ್ರಾಧಿಕಾರದ ಆಶಯವಾಗಿದೆ.

