ಧರ್ಮಸ್ಥಳ : ಇದು ಯಾವುದೇ ಸಿನಿಮಾದ ಕಥೆಯಲ್ಲ, ನೈಜ ಜೀವನದಲ್ಲಿ ನಡೆದ ಅಚ್ಚರಿಯ ಘಟನೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬ ಬಾಲಕ 26 ವರ್ಷಗಳ ಹಿಂದೆ ಮನೆ ಬಿಟ್ಟು ನಾಪತ್ತೆಯಾಗಿದ್ದ. ಇದೀಗ ಆತ ಮಹಾರಾಷ್ಟ್ರದಲ್ಲಿ ‘ಸಲೀಂ ಅಬ್ದುಲ್ ಅನ್ಸಾರಿ’ ಎಂಬ ಹೆಸರಿನಿಂದ ಜೀವನ ಸಾಗಿಸುತ್ತಿದ್ದು, ಅನಿರೀಕ್ಷಿತವಾಗಿ ತನ್ನ ಊರಿಗೆ ಮರಳಿ ತಾಯಿಯನ್ನು ಭೇಟಿಯಾಗಿ ಕುಟುಂಬದವರೊಂದಿಗೆ ಭಾವುಕ ಕ್ಷಣಗಳನ್ನು ಹಂಚಿಕೊಂಡಿದ್ದಾನೆ.

2000ನೇ ಇಸವಿಯಲ್ಲಿ ಕೇವಲ 12 ವರ್ಷದ ಬಾಲಕನಾಗಿದ್ದ ಸತೀಶ್, ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದ ಆಕರ್ಷಣೆಗೆ ಒಳಗಾಗಿ ಅವರೊಂದಿಗೆ ತೆರಳಿದ್ದ. ಬಳಿಕ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಆತ ಕೊನೆಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದ. ಅಲ್ಲಿಯೇ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಸತೀಶ್, ಕಾಲಕ್ರಮೇಣ ತನ್ನ ಊರು, ಭಾಷೆ ಹಾಗೂ ಕುಟುಂಬದವರ ನೆನಪನ್ನೇ ಮರೆತಿದ್ದ. ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಹೆಸರು ಬದಲಾಯಿಸಿಕೊಂಡಿದ್ದ. ತಾಲೀಮಾ ಎಂಬ ಮಹಿಳೆಯನ್ನು ವಿವಾಹವಾಗಿರುವ ಈತನಿಗೆ ಇಬ್ಬರು ಮಕ್ಕಳಿದ್ದಾರೆ.
ಇತ್ತೀಚೆಗೆ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಬಂದಿದ್ದ ವೇಳೆ, ಆತ ಹಿಂದೆ ಸರ್ಕಸ್ ನಡೆದಿದ್ದ ಸ್ಥಳವನ್ನು ಕಂಡು ಹಳೆಯ ನೆನಪುಗಳನ್ನು ಮರುಕಳಿಸಿಕೊಂಡಿದ್ದಾನೆ. ತನ್ನ ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ ಸ್ಥಳೀಯರ ಸಹಾಯದಿಂದ ತನ್ನ ಹಳೆಯ ಮನೆಯನ್ನು ಪತ್ತೆಹಚ್ಚಿ ಅಲ್ಲಿಗೆ ತೆರಳಿದ್ದಾನೆ.
ಮನೆಯ ಮುಂದೆ ನಿಂತಿದ್ದ ಮಗನನ್ನು ಕಂಡ ತಾಯಿ ಭಾವುಕರಾಗಿ ಕಣ್ಣೀರು ಹಾಕಿದ್ದು, ಕುಟುಂಬದ ಸದಸ್ಯರು ಸಂತೋಷದಿಂದ ಆತನನ್ನು ಬರಮಾಡಿಕೊಂಡಿದ್ದಾರೆ. ಸತೀಶ್‌ಗೆ ಈಗ ತುಳು ಹಾಗೂ ಕನ್ನಡ ಭಾಷೆಗಳು ಸಂಪೂರ್ಣ ಮರೆತುಹೋಗಿದ್ದು, ಹಿಂದಿಯಲ್ಲಿ ಮಾತ್ರ ಮಾತನಾಡುತ್ತಿದ್ದಾನೆ. ತಾಯಿಗೆ ಹಿಂದಿ ಗೊತ್ತಿಲ್ಲದಿದ್ದರೂ, ತಾಯಿ-ಮಗನ ಪ್ರೀತಿ ಭಾಷೆಯ ಅಂತರವನ್ನು ಮೀರಿದ್ದು, ಇಬ್ಬರೂ ಪರಸ್ಪರ ಅಪ್ಪಿಕೊಂಡು ಸಂತಸ ಹಂಚಿಕೊಂಡಿದ್ದಾರೆ.
ಮಗ ಮರಳಿ ಸಿಗಲೆಂದು ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲು ದೈವಸ್ಥಾನಗಳಲ್ಲಿ ತಾಯಿ ವರ್ಷಗಳಿಂದ ಹರಕೆ ಹೊತ್ತಿದ್ದರು. “ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆ ನೋಡಬೇಕು” ಎಂಬ ತಾಯಿಯ ಆಸೆ ಇದೀಗ ಈಡೇರಿದೆ.
ಕೆಲವು ದಿನಗಳ ಕಾಲ ಕುಟುಂಬದವರೊಂದಿಗೆ ಕಾಲ ಕಳೆದ ಸತೀಶ್ ಅಲಿಯಾಸ್ ಸಲೀಂ, ಬಳಿಕ ಮಹಾರಾಷ್ಟ್ರಕ್ಕೆ ಮರಳಿದ್ದು, ಮುಂದೆಯೂ ಕುಟುಂಬದ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದ್ದಾನೆ. ಈ ಘಟನೆ ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ತಾಯಿಯ ಪ್ರೀತಿ ಮತ್ತು ಕುಟುಂಬದ ಬಂಧಕ್ಕೆ ಜೀವಂತ ಸಾಕ್ಷಿಯಾಗಿದೆ.

