ಮಂಗಳೂರು : ದೇಶದಲ್ಲಿ ಅಭಿವೃದ್ಧಿಪಡಿಸಲಾದ ರೋಬೋಟಿಕ್ ತಂತ್ರಜ್ಞಾನ ಹಾಗೂ ಭಾರತೀಯ ವೈದ್ಯರ ಪರಿಣತಿ ಮತ್ತೊಮ್ಮೆ ಜಗತ್ತನ್ನು ಬೆರಗುಗೊಳಿಸಿದೆ. ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ಸುಧೀರ್ ಶ್ರೀವಾಸ್ತವ ಅವರು ಗಯಾನಾದಲ್ಲಿ ಕುಳಿತು ದೇಶದ ಇಂದೋರಿನ ಒಬ್ಬ ರೋಗಿಯ ಹೃದಯದ ಮೇಲೆ ಯಶಸ್ವಿ ರೋಬೋಟಿಕ್ ಟೆಲಿ-ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವೈದ್ಯಕೀಯ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಸುಮಾರು 20,000 ಕಿಲೋಮೀಟರ್ ದೂರದಿಂದ ನಡೆಸಲಾದ ಈ ಶಸ್ತ್ರಚಿಕಿತ್ಸೆ, ಇದುವರೆಗೆ ನಡೆದಿರುವ ವಿಶ್ವದ ಅತಿ ದೂರದ ರೋಬೋಟ್-ಸಹಾಯಿತ ಹೃದಯ ಟೆಲಿ-ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಈ ಐತಿಹಾಸಿಕ ಪ್ರಕ್ರಿಯೆ ಗಯಾನಾದ ಜಾರ್ಜ್‌ಟೌನ್ ಪಬ್ಲಿಕ್ ಹಾಸ್ಪಿಟಲ್ ಕಾರ್ಪೊರೇಶನ್ ಹಾಗೂ ದೇಶದ ಐಆರ್‌ಸಿಎಡಿ ಇಂಡಿಯಾ, ಇಂದೋರ್ ನಡುವಿನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.
ಈ ಸಾಧನೆಯ ವಿಶೇಷತೆ ಎಂದರೆ, ಈ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಎಸ್‌ಎಸ್‌ಐ ಮಂತ್ರ ಸರ್ಜಿಕಲ್ ರೊಬೊಟಿಕ್ ಸಿಸ್ಟಮ್ ಸಹಾಯದಿಂದ ನಡೆಸಲಾಗಿದೆ. ಇದರಿಂದ ಜಾಗತಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಗುರುತು ದೊರೆತಿದೆ. 20,000 ಕಿಲೋಮೀಟರ್ ದೂರದಿಂದ ಶಸ್ತ್ರಚಿಕಿತ್ಸೆ ಹೇಗೆ ನಡೆಸಲಾಯಿತು.
ಡಾ. ಸುಧೀರ್ ಶ್ರೀವಾಸ್ತವ ಅವರು ಗಯಾನಾದಲ್ಲಿರುವ ಎಸ್‌ಎಸ್‌ಐ ಮಂತ್ರಾಸನ ಟೆಲಿ-ಸರ್ಜನ್ ಕನ್ಸೋಲ್ ಮೂಲಕ ಶಸ್ತ್ರಚಿಕಿತ್ಸೆಯನ್ನು ನಿಯಂತ್ರಿಸಿದರು. ಈ ವೇಳೆ ರೋಗಿ ಇಂದೋರ್‌ನ ಐಆರ್‌ಸಿಎಡಿ ಇಂಡಿಯಾದಲ್ಲಿದ್ದರು. ರೋಬೋಟಿಕ್ ಕೈಗಳು ವೈದ್ಯರ ಕೈ ಚಲನೆಗಳನ್ನು ರಿಯಲ್-ಟೈಮ್‌ನಲ್ಲಿ ಅನುಕರಿಸಿ, ಹೃದಯಕ್ಕೆ ಸಂಬಂಧಿಸಿದ ಸಂಕೀರ್ಣವಾದ ಎಡ ಆಂತರಿಕ ಸ್ತನ ಅಪಧಮನಿ ತೆಗೆದುಹಾಕುವಿಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿವೆ.ಡಾ.ಲಲಿತ್ ಮಲಿಕ್, ಡಾ.ಮೊಹಮ್ಮದ್ ಇರ್ಫಾನ್ ಅಲಿ ಇದ್ದರು.

