ಭಕ್ತಿಯ ಸಿಂಚನ, ನಾದ ನಂದನ : ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ‘ನಾದ ನಂದನಂ’ ವಿಶೇಷ ಭಜನ್ ಹಾಗೂ ಸಂಕೀರ್ತನೋತ್ಸವದ ವೈಭವ!

0
83

-ಮಂದಾರ ರಾಜೇಶ್ ಭಟ್

“ಸಂಗೀತವೆಂಬುದು ಬರಿ ಸ್ವರಗಳ ಜೋಡಣೆಯಲ್ಲ, ಅದು ಭಕ್ತನ ಅಂತರಾಳದಿಂದ ಪರಮಾತ್ಮನಡೆಗೆ ಹರಿಯುವ ದಿವ್ಯ ನಾದಗಂಗೆ.”

​ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಸಂಗೀತಕ್ಕೊಂದು ಹೊಸ ಆಯಾಮ ನೀಡಿ, ಒಂದು ಹಾಡನ್ನು ಹೇಗೆಲ್ಲಾ ಜನರಂಜಕವಾಗಿ ಪ್ರಸ್ತುತಪಡಿಸಬಹುದು ಎಂಬ ಚಿಂತನೆಯೊಂದಿಗೆ ರೂಪುಗೊಂಡಿರುವ ‘ನಾದ ನಂದನಂ’ (ರಿ.) ಮ್ಯೂಸಿಕಲ್ ಇನ್‌ಸ್ಟಿಟ್ಯೂಷನ್‌ನ ಚೊಚ್ಚಲ ಕಾರ್ಯಕ್ರಮವಾದ ‘ನಾದ ನಂದನಂ’ ಭಜನಾ ಹಾಗೂ ಸಂಕೀರ್ತನೋತ್ಸವವು 04-10-2026 ರಂದು ಸಂಜೆ 05:00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅತ್ಯಂತ ವೈಭವೋಪೇತವಾಗಿ ಜರುಗಲಿದೆ.

2 ಬಾರಿ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿರುವ ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕ ಶ್ರೀ ರಮೇಶ್ಚಂದ್ರ ಅವರ ಸಮರ್ಥ ಹಾಗೂ ಭಾವಪೂರ್ಣ ಮುಂದಾಳುತ್ವದಲ್ಲಿ ಭಕ್ತಿಗೀತೆ, ಭಾವಗೀತೆ, ಜನಪದಗೀತೆ ಹಾಗೂ ಇತರ ಮಧುರ ಗೀತೆಗಳನ್ನೊಳಗೊಂಡ ಬಹುಭಾಷಾ ಹಾಡುಗಳ ರಸದೌತಣ ಇಲ್ಲಿ ಸಂಗೀತಾಸಕ್ತರಿಗೆ ಲಭಿಸಲಿದೆ.

ಪಕ್ವ ಹಾಡುಗಾರರು, ನುರಿತ ಸಂಗೀತಗಾರರ ಮೇಳದೊಂದಿಗೆ ಅತ್ಯಾಧುನಿಕ ಎಲ್.ಇ.ಡಿ ಪರದೆ ಹಾಗೂ ವಿಶೇಷ ಧ್ವನಿ-ಬೆಳಕಿನ ರಂಗ ವಿನ್ಯಾಸವನ್ನು ಈ ತಂಡವು ಹೊಂದಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ

​ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಮೂಡಿಬರಲಿರುವ ಈ ದಿವ್ಯ ಸಮಾರಂಭವನ್ನು ಕರ್ನಾಟಕ ಬ್ಯಾಂಕ್‌ನ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ರಾಘವೇಂದ್ರ ಭಟ್ ಅವರು ಉದ್ಘಾಟಿಸಲಿದ್ದಾರೆ.

ನಾಡೋಜ ಡಾ. ಜಿ. ಶಂಕರ್ ಹಾಗೂ ಡಾ. ಸರ್ವೋತ್ತಮ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಬೆಂಗಳೂರಿನ ಖ್ಯಾತ ಭಜನಕಾರರಾದ ಶಂಕರ ಶಾನುಭೋಗ್ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.

​ಈ ಸಾಂಸ್ಕೃತಿಕ ಮಹೋತ್ಸವವನ್ನು ಯಶಸ್ವಿಗೊಳಿಸಲು ಗೌರವ ಸ್ಥಾಪಕಾಧ್ಯಕ್ಷರಾದ ರಮೇಶ್ಚಂದ್ರ (ಚಲನಚಿತ್ರ ಹಿನ್ನೆಲೆ ಗಾಯಕರು, ಬೆಂಗಳೂರು), ಸ್ಥಾಪಕಾಧ್ಯಕ್ಷರಾದ ಎಸ್ ಎಲ್. ಭಾರಾದ್ವಾಜ್ , ಪ್ರಧಾನ ಸಂಚಾಲಕರು ಹಾಗೂ ಸಾರ್ವಜನಿಕ ಸಂಪರ್ಕಕ ಅಧಿಕಾರಿ ಪ್ರಮೋದ್ ಸಪ್ರೆ , ಕಾರ್ಯಕ್ರಮದ ಸಂಚಾಲಕರಾದ ರವೀಂದ್ರ ಪ್ರಭು ಹಾಗೂ ನಾದ ನಂದನಂ ತಂಡ ಮತ್ತು ಸಮಿತಿಯ ಎಲ್ಲಾ ಸದಸ್ಯರು ಶ್ರಮಿಸುತ್ತಿದ್ದು, ಸಮಸ್ತ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಯೋಜಕತ್ವ ಮತ್ತು ಸಹಕಾರ ನೀಡುವಂತೆ ಆಯೋಜಕರು ಸವಿನಯವಾಗಿ ವಿನಂತಿಸಿದ್ದಾರೆ.

​ಪ್ರಾಯೋಜಕತ್ವ ಹಾಗೂ ಹೆಚ್ಚಿನ ಮಾಹಿತಿಗಾಗಿ :9448223063 ಸಂಪರ್ಕಿಸುವಂತೆ ಕೋರಲಾಗಿದೆ.