ಸಂಘಟನೆ ಗಟ್ಟಿಯಾದರೆ ಸಮಾಜ ಬಲಿಷ್ಠ : ನಾರಾಯಣ ಗುರುಗಳ ತತ್ವವೇ ನಮ್ಮ ದಾರಿ – ರೇಣುಕಾ ಕಣಿಯೂರು

0
12

ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ದಿನಾಂಕ 08-09-2026 ರಂದು ಪೆರಾಜೆ ಗ್ರಾಮದ ರೂಪಶ್ರೀ ದಿನೇಶ್ ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೇಣುಕಾ ಕಣಿಯೂರು   ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಸಂದೇಶವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ, ಇಡೀ ಸಮಾಜದ ಉನ್ನತಿ ಹಾಗೂ ಮಾನವೀಯ ಬದುಕಿಗೆ ದಾರಿದೀಪವಾಗಿದೆ ಎಂದರು.

ದೇವರ ನಾಡು ಕೇರಳದಲ್ಲಿ ಜನಿಸಿದ ನಾರಾಯಣ ಗುರುಗಳು ಅಂದಿನ ಸಾಮಾಜಿಕ ಅಸಮಾನತೆ, ಅಜ್ಞಾನ, ಮೂಢನಂಬಿಕೆ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿ, ಶಿಕ್ಷಣವೇ ಸಮಾಜದ ಪ್ರಗತಿಯ ಮೂಲ, ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ ಎಂಬ ಸಂದೇಶವನ್ನು ಸಾರಿದರು.

“ನಾರಾಯಣ ಗುರುಗಳು ನಮಗೆ ದೇವಸ್ಥಾನಗಳನ್ನು ಮಾತ್ರ ನೀಡಲಿಲ್ಲ; ದೇವಸ್ಥಾನದ ಮೂಲಕ ಒಗ್ಗಟ್ಟು, ಒಗ್ಗಟ್ಟಿನ ಮೂಲಕ ಸಂಘಟನೆ, ಸಂಘಟನೆಯ ಮೂಲಕ ಸಮಾಜದ ಉನ್ನತಿಯ ದಾರಿಯನ್ನು ತೋರಿಸಿದರು. ಆ ದಾರಿಯಲ್ಲಿ ಸಾಗುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದು ರೇಣುಕಾ ಕಣಿಯೂರು ಅಭಿಪ್ರಾಯಪಟ್ಟರು.

ಯುವವಾಹಿನಿ (ರಿ.) ಮಾಣಿ ಘಟಕವು ನಾರಾಯಣ ಗುರುಗಳ ಈ ಮಹತ್ತರ ಸಂದೇಶವನ್ನು ಮನೆಮನೆಗೆ ತಲುಪಿಸುವುದು, ಯುವಜನರನ್ನು ಸಂಘಟಿಸುವುದು, ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಗೆ ಪ್ರೋತ್ಸಾಹ ನೀಡುವುದು ಮತ್ತು ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೊಡಾಜೆ  ವಹಿಸಿ, ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ನಾರಾಯಣ ಗುರುತತ್ವ ನಿರ್ದೇಶಕ ಶ್ರೀಧರ ಪೂಜಾರಿ ಮುಜಲ ವಂದಿಸಿದರು.ಘಟಕದ ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.