ನೀರಿನ ಟ್ಯಾಂಕ್‌ನಲ್ಲಿ ಅಡಗಿತ್ತು ಭಯಾನಕ ರಹಸ್ಯ.. ಟ್ಯಾಂಕ್‌ ತೆರೆದಾಗ ಕಂಡ ದೃಶ್ಯ ನೋಡಿ ಕುಟುಂಬ ಶಾಕ್!

0
63

ಹರಿದ್ವಾರ : ಸಾಮಾನ್ಯವಾಗಿ ಮನೆಯಲ್ಲಿ ಒಂದು ಹಾವು ಕಂಡರೂ ಸಾಕು, ಮನೆಯವರಲ್ಲಿ ಆತಂಕ ಮನೆ ಮಾಡುತ್ತದೆ. ಆದರೆ ಮನೆಯವರು ಪ್ರತಿದಿನ ಬಳಸುವ ನೀರಿನ ಟ್ಯಾಂಕ್‌ನೊಳಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ 27 ಮರಿ ಹಾವುಗಳು ಪತ್ತೆಯಾದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ಬೆಳಕಿಗೆ ಬಂದಿದೆ.

ಮನೆಯ ನೀರಿನ ಟ್ಯಾಂಕ್‌ನಿಂದ ನೀರು ಸರಿಯಾಗಿ ಬರುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬದ ಸದಸ್ಯರು ಟ್ಯಾಂಕ್‌ನ ಮುಚ್ಚಳ ತೆಗೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಟ್ಯಾಂಕ್‌ನೊಳಗೆ ಹಾವುಗಳು ಹರಿದಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಸಾಕಷ್ಟು ಸಮಯದ ಶ್ರಮದ ಬಳಿಕ ಟ್ಯಾಂಕ್‌ನೊಳಗಿದ್ದ ಎಲ್ಲಾ ಹಾವುಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬಳಿಕ ಎಣಿಕೆ ಮಾಡಿದಾಗ ಒಟ್ಟು 27 ಮರಿ ಹಾವುಗಳು ಪತ್ತೆಯಾಗಿರುವುದು ದೃಢಪಟ್ಟಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಟ್ಯಾಂಕ್ ಸಮೀಪದ ಬಿರುಕು ಅಥವಾ ಪೈಪ್‌ಗಳ ಮೂಲಕ ತಾಯಿ ಹಾವು ಒಳನುಗ್ಗಿ ಮೊಟ್ಟೆ ಇಟ್ಟಿರಬಹುದು. ಬಳಿಕ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಅನೇಕರು ತಮ್ಮ ಮನೆಗಳ ನೀರಿನ ಟ್ಯಾಂಕ್‌ಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಅಧಿಕಾರಿಗಳು ಬಳಿಕ ಅವುಗಳನ್ನು ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಅರಣ್ಯ ಇಲಾಖೆ ಸಾರ್ವಜನಿಕರಿಗೆ ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು, ಮುಚ್ಚಳಗಳನ್ನು ಗಟ್ಟಿಯಾಗಿ ಮುಚ್ಚಿಡುವುದು ಹಾಗೂ ಟ್ಯಾಂಕ್ ಸುತ್ತಮುತ್ತ ಪೊದೆಗಳು ಬೆಳೆಯದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದೆ.

ಈ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, “ಕುಡಿಯುವ ನೀರಿನ ಟ್ಯಾಂಕ್‌ನಲ್ಲೇ 27 ಹಾವುಗಳು!” ಎಂಬ ಸುದ್ದಿ ಅನೇಕರನ್ನು ಅಚ್ಚರಿಗೆ ದೂಡಿದೆ.

LEAVE A REPLY

Please enter your comment!
Please enter your name here