ಗೃಹಲಕ್ಷ್ಮಿ ಹಣಕ್ಕೆ ಕತ್ತರಿ : 12,719 ಮಹಿಳೆಯರ ಹೆಸರು ಪಟ್ಟಿಯಿಂದ ಔಟ್!

0
38

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಪರಿಷ್ಕರಣೆ ಕೈಗೊಳ್ಳಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಾತ್ರ 12,719 ಮಹಿಳೆಯರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದರಿಂದ ಸಾವಿರಾರು ಮಹಿಳೆಯರ ಖಾತೆಗೆ ಬರುತ್ತಿದ್ದ ಮಾಸಿಕ ₹2,000 ಹಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರಿಶೀಲನೆ ವೇಳೆ, 6,624 ಮೃತ ಮಹಿಳೆಯರ ಖಾತೆಗಳಿಗೆ ಯೋಜನೆಯ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ. ಇದೇ ವೇಳೆ ಐಟಿ ಮತ್ತು ಜಿಎಸ್‌ಟಿ ಪಾವತಿಸುತ್ತಿರುವ 4,800ಕ್ಕೂ ಹೆಚ್ಚು ಮಹಿಳೆಯರು ಸಹ ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅನರ್ಹರನ್ನು ಗುರುತಿಸಿ ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆ ಆರಂಭಿಸಲಾಗಿದೆ.

2023ರ ಆಗಸ್ಟ್‌ನಲ್ಲಿ ಆರಂಭವಾದ ಗೃಹಲಕ್ಷ್ಮಿ ಯೋಜನೆಯಡಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 2,82,030 ಮಹಿಳೆಯರು ಫಲಾನುಭವಿಗಳಾಗಿ ನೋಂದಾಯಿಸಿಕೊಂಡಿದ್ದರು. ಆದರೆ ಇತ್ತೀಚಿನ ಮರುಪರಿಶೀಲನೆಯಲ್ಲಿ ಸಾವಿರಾರು ಹೆಸರುಗಳು ಅನರ್ಹ ಪಟ್ಟಿಗೆ ಸೇರಿವೆ.

ಮೃತರ ಖಾತೆಗೂ ಹಣ ಜಮೆ!

ಯೋಜನೆ ಆರಂಭವಾದ ಬಳಿಕ ಮೃತಪಟ್ಟ ಹಲವರ ಖಾತೆಗಳಿಗೆ ಸಹ ಸರ್ಕಾರದ ಹಣ ಜಮೆಯಾಗುತ್ತಿದ್ದು, ಇದರಿಂದ ಕೋಟ್ಯಂತರ ರೂಪಾಯಿ ವ್ಯತ್ಯಾಸ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮೃತಪಟ್ಟ 6,624 ಫಲಾನುಭವಿಗಳ ಪೈಕಿ 1,777 ಮಂದಿಯ ಹೆಸರನ್ನು ಈಗಾಗಲೇ ತೆಗೆದುಹಾಕಲಾಗಿದ್ದು, ಉಳಿದ 4,847 ಮಂದಿಯ ಹೆಸರನ್ನು ಕೈಬಿಡುವ ಪ್ರಕ್ರಿಯೆ ಮುಂದುವರಿದಿದೆ.

ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ

ಅಕ್ರಮ ಹಣ ಸಂದಾಯ ತಡೆಯಲು ಸರ್ಕಾರ ‘ಒನ್‌ ಟೈಮ್‌ ಬಯೋಮೆಟ್ರಿಕ್‌ ದೃಢೀಕರಣ’ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳು ಸೇವಾ ಕೇಂದ್ರಗಳಿಗೆ ತೆರಳಿ ಹೆಬ್ಬೆರಳಿನ ಗುರುತು, ಕಣ್ಣಿನ ಸ್ಕ್ಯಾನ್ ಅಥವಾ ಮುಖ ಗುರುತಿನ ಪರಿಶೀಲನೆ ಮಾಡಿಸಬೇಕಾಗುತ್ತದೆ.

ಕೆಲವರಿಗೆ RD ಸಂಖ್ಯೆ ಕಡ್ಡಾಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ತಮ್ಮ ಜಾತಿ ಪ್ರಮಾಣಪತ್ರದಲ್ಲಿರುವ RD ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕವೇ ಯೋಜನೆಯ ಹಣ ಖಾತೆಗೆ ಜಮೆಯಾಗಲಿದೆ.

ಅರ್ಹರಿಗಷ್ಟೇ ಹಣ ತಲುಪಿಸಲು ಕ್ರಮ

ಯೋಜನೆಯ ದುರ್ಬಳಕೆ ತಡೆಯುವುದು ಹಾಗೂ ನಿಜವಾದ ಅರ್ಹ ಮಹಿಳೆಯರಿಗೆ ಹಣ ತಲುಪಿಸುವ ಉದ್ದೇಶದಿಂದ ಸರ್ಕಾರ ಈ ಪರಿಷ್ಕರಣೆ ಕೈಗೊಂಡಿದೆ. ಹೀಗಾಗಿ ಗೃಹಲಕ್ಷ್ಮಿ ಫಲಾನುಭವಿಗಳು ತಮ್ಮ ದಾಖಲೆಗಳು ಮತ್ತು ಬಯೋಮೆಟ್ರಿಕ್ ವಿವರಗಳನ್ನು ಶೀಘ್ರದಲ್ಲೇ ನವೀಕರಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here