ದಾನಿಗಳ ನೆರವಿನಿಂದಲೇ ನಿರ್ಮಾಣ : ಮಾರ್ಚ್ 08 ರಂದು ಲೋಕಾರ್ಪಣೆ.
38ನೇ ಕಳ್ತೂರು ಸಂತೆಕಟ್ಟೆ :
ಹೆಬ್ರಿಗೆ ಸಮೀಪದ ಗ್ರಾಮೀಣ ಪ್ರದೇಶವಾದ ನಮ್ಮೂರಿನಲ್ಲಿ ಸ್ಮಶಾನ ಇರಲಿಲ್ಲ. ಬಹುದೂರದ ಕೊಕ್ಕರ್ಣೆ, ಹೆಬ್ರಿಗೆ ಹೋಗಬೇಕಿತ್ತು. ಅದಕ್ಕಾಗಿ 38ನೇ ಕಳ್ತೂರು ಸಂತೆಕಟ್ಟೆಯಲ್ಲಿ ಸುಸಜ್ಜಿತವಾದ ಸಾರ್ವಜನಿಕ ಹಿಂದೂ ರುದ್ರಭೂಮಿಯನ್ನು ನಿರ್ಮಿಸಬೇಕೆಂದು ಬಹುಕಾಲದ ಹಿಂದೆ ಸಂಕಲ್ಪ ಮಾಡಿದ್ದೇವು. ಆ ಸಂಕಲ್ಪ ಈಗ ಈಡೇರಿದೆ. ನಮ್ಮೂರಿನ ದಾನಿಗಳ ನೆರವಿನಿಂದಲೇ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿ ನಿರ್ಮಾಣಗೊಂಡಿದ್ದು ಮಾರ್ಚ್ 08 ರಂದು ಲೋಕಾರ್ಪಣೆಗೊಳ್ಳಲಿದೆ. ನಮ್ಮ ಜನರಲ್ಲಿ ಇನ್ನೂಕೂಡ ಸ್ಮಶಾನದ ಬಗೆಗೆ ಭಯವಿದೆ. ಹಾಗಾಗಿ ಸ್ಮಶಾನ ಪುಣ್ಯದ ಭೂಮಿ ಎಂಬ ಪರಿಕಲ್ಪನೆಯಲ್ಲಿ ಜನರ ಭಯ ದೂರವಾಗಿಸಲು ಭವ್ಯವಾಗಿ ಸಕಲ ವ್ಯವಸ್ಥೆಯೊಂದಿಗೆ ರುದ್ರಭೂಮಿಯನ್ನು ಎಲ್ಲರ ಸಹಕಾರದೊಂದಿಗೆ ನಿರ್ಮಾಣ ಮಾಡಿದ್ದೇವೆ ಎಂದು ೩೮ನೇ ಕಳ್ತೂರು ಸಂತೆಕಟ್ಟೆಯ ಸ್ಮಶಾನ ಅಭಿವೃದ್ಧಿ ಸಮಿತಿ (ರಿ) ಅಧ್ಯಕ್ಷ ರುಧ್ರಭೂಮಿ ನಿರ್ಮಾಣದ ರೂವಾರಿ ಬಿ.ಚಂದ್ರಶೇಖರ ಶೆಟ್ಟಿ ತಿಳಿಸಿದರು.
0.78 ಎಕರೆ ಜಾಗವನ್ನು ಸಾರ್ವಜನಿಕ ಹಿಂದೂರುದ್ರಭೂಮಿಗಾಗಿಯೇ ಜಾಗವನ್ನು ಕಾದಿರಿಸಿ ಆದೇ ಜಾಗದಲ್ಲಿ ಸಾರ್ವಜನಿಕ ಹಿಂದೂ ಭೂಮಿಯನ್ನು ನಿರ್ಮಿಸಲಾಗಿದೆ. 2005ರಿಂದ 2010 ರ ತನಕ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಗ ಸ್ಮಶಾನ ನಿರ್ಮಾಣದ ಕನಸು ಕಂಡಿದ್ದೆ… ಹಲವು ಪ್ರಯತ್ನದ ಫಲವಾಗಿ 2021ರಲ್ಲಿ ಸದಸ್ಯನಾಗಿ ಸ್ಮಶಾನ ನಿರ್ಮಾಣಕ್ಕೆ ವಿಶೇಷ ಯೋಜನೆಯನ್ನು ಸಿದ್ಧಪಡಿಸಿ ನಮ್ಮೂರಿನ ದಾನಿಗಳಲ್ಲಿ ಪ್ರಸ್ತಾಪಿಸಿದಾಗ ಎಲ್ಲರೂ ಸಂತೋಷದಿಂದ ಒಪ್ಪಿ ನೆರವು ನೀಡಿದ್ದಾರೆ, ಆದರ ಫಲವಾಗಿಯೇ ಈಗ ರುದ್ರಭೂಮಿ ನಿರ್ಮಾಣಗೊಂಡಿದೆ ಎಂದು ಚಂದ್ರಶೇಖರ ಶೆಟ್ಟಿ ಸಂತಸ ವ್ಯಕ್ತಪಡಿಸಿ ಜೀವನದ ಸಾರ್ಥಕ ಸೇವೆಯನ್ನು ಸ್ಮರಿಸಿದರು.
ಆರ್ಬೆಟ್ಟು ವೆಂಕಟೇಶ ಕಾಮತ್ ಹೆಸರಿನಲ್ಲಿ ಸುಸಜ್ಜಿತ ಸಾರ್ವಜನಿಕ ಹಿಂದೂ ರುದ್ರಭೂಮಿ : ಸಂತೇಕಟ್ಟೆಯ ಉದ್ಯಮಿ ಎ.ಪ್ರಶಾಂತ್ ಕಾಮತ್ ಮತ್ತು ಮಾಧವ ಕಾಮತ್ ತನ್ನ ತಂದೆಯ ಸ್ಮರಣಾರ್ಥ ಆರ್ಬೆಟ್ಟು ವೆಂಕಟೇಶ ಕಾಮತ್ ಹೆಸರಿನಲ್ಲಿ ಸುಸಜ್ಜಿತ ಸಾರ್ವಜನಿಕ ಹಿಂದೂ ರುದ್ರಭೂಮಿಯನ್ನು ನಿರ್ಮಿಸಿಕೊಟ್ಟಿದ್ದಾರೆ.
ದಾನಿಗಳ ನೆರವು : ೩೮ನೇ ಕಳ್ತೂರು ಗ್ರಾಮ ಪಂಚಾಯಿತಿಯ ವತಿಯಿಂದ ಜಾಗದ ಸಮತಟ್ಟು ಕಾರ್ಯ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು 2 ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ. ವಿವಿಧ ಜನಪ್ರತಿನಿಧಿಗಳು ಕೂಡ ಸಹಕಾರ ನೀಡಿದ್ದಾರೆ. ಹೆಬ್ರಿಯ ಉದ್ಯಮಿ ಎಚ್. ಸತೀಶ ಪೈ ರುದ್ರಭೂಮಿಗೆ ಕಚೇರಿಯನ್ನು ನಿರ್ಮಿಸಿಕೊಟ್ಟಿದ್ದಾರೆ. ಮುಂಬಯಿಯಲ್ಲಿ ಎಂಜಿನಿಯರ್ ಆಗಿರುವ ಎ. ಸಂಜಯ್ ಕಾಮತ್ ಕಟ್ಟಿಗೆ ಸಂಗ್ರಹದ ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ. ಬ್ರಹ್ಮಾವರ ಉಪ್ಪಿಕೋಟೆಯ ಉದ್ಯಮಿ ಮಹೇಶ ಶೆಟ್ಟಿಯವರು ಮತ್ತು ಕೆರೆಬೆಟ್ಟು ಸೂಡರಮನೆ ಪ್ರಸಾದ್ ಸೂಡ ಇಂಟರ್ ಲಾಕ್ ಅಳವಡಿಸಿಕೊಟ್ಟಿದ್ದಾರೆ. ಉದ್ಯಮಿ ನರಸಿಂಹ ಗಡಿಯಾರ್ ಸ್ಮಶಾನದ ಆವರಣದಲ್ಲಿ ತ್ಯಾಜ್ಯ ಹೊಂಡ ನಿರ್ಮಿಸಿಕೊಟ್ಟಿದ್ದಾರೆ.
ವಿದ್ಯುತ್ ಗುತ್ತಿಗೆದಾರ ಶಿವಪುರದ ಶ್ರೀನಿವಾಸ ಹೆಬ್ಬಾರ್ ವಿದ್ಯುತ್ ಸಂಪರ್ಕ ಪಡೆಯಲು ನೆರವಾಗಿದ್ದಾರೆ. ಪಿಡಬ್ಲ್ಯೂಡಿ ಗುತ್ತಿಗೆದಾರ ತಡಾಲು ಸುರೇಶ ಶೆಟ್ಟಿ, ಶಿವಮೊಗ್ಗ ಎಲ್‌ಐಸಿಯ ಜನಾರ್ಧನ್ ನಾಯ್ಕ್, ಉದ್ಯಮಿ ಕಂಬಳಗದ್ದೆಮನೆ ಚಂದ್ರಶೇಖರ ಶೆಟ್ಟಿ, ಉದ್ಯಮಿ ವಿಘ್ನೇಶ್ ಕಾಮತ್ ಸಂತೆಕಟ್ಟೆ, ಸಂತೇಕಟ್ಟೆ ಬೆಳಾರ್ ಸಂಜೀವಿ ಎಸ್ ಶೆಟ್ಟಿ, ಸವಿತಾ ಸುಧಾಕರ ನಾಯ್ಕ್ ಸಂತೇಕಟ್ಟೆ, ಬೆಂಗಳೂರು ಎಂಜಿನಿಯರ್ ಎಂ.ದಯಾನಂದ ಕಾಮತ್, ನಿವೃತ್ತ ಬ್ಯಾಂಕ್ ಅಧಿಕಾರಿ ಸಂತೇಕಟ್ಟೆ ಜಯರಾಮ ನಾಯ್ಕ್, ಕ್ರಷರ್ ಉದ್ಯಮಿ ಸಂತೆಕಟ್ಟೆ ಗಿರೀಶ್ ಶೆಟ್ಟಿ, ಚಾರದ ಶರಣ್, ಮುಂತಾದ ದಾನಿಗಳು ರುದ್ರಭೂಮಿ ನಿರ್ಮಾಣ ಕಾರ್ಯಕ್ಕೆ ನೆರವು ನೀಡಿದ್ದಾರೆ. ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ (ನಿ) ಕೊಕ್ಕರ್ಣೆ ಕೂಡ ನೆರವು ನೀಡಿದೆ.
ಕನಸು ನನಸಾಗಲು ಸಹಕಾರ :
ಪುಣ್ಯಕಾರ್ಯದ ಯಶಸ್ಸಿನ ಹಿಂದೆ ಸ್ಮಶಾನ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಗಿರೀಶ್ ಕಾಮತ್ ಮತ್ತು ರವಿ ಪೂಜಾರಿ ಅವರ ಅಪಾರ ಶ್ರಮವಿದೆ ಎಂದು ಚಂದ್ರಶೇಖರ ಶೆಟ್ಟಿಯವರು ಸ್ಮರಿಸುತ್ತಾರೆ. ಕಳೆದ 3 ತಿಂಗಳಿನಿಂದ ನಿರಂತರವಾಗಿ ಚಂದ್ರಶೇಖರ ಶೆಟ್ಟಿಯವರು ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ನಾವೆಲ್ಲ ಅವರ ಕಲ್ಪನೆಗೆ ಸಾಕಾರ ನೀಡಿದ್ದೇವೆ. ಈಗ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದೆ ಮನಸ್ಸು ತುಂಬಿ ಬಂದಿದೆ ಎಂದು ಸಂತೆಕಟ್ಟೆ ಗಿರೀಶ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.
ಧರ್ಮಸ್ಥಳ ಯೋಜನೆಯಿಂದ ಮತ್ತೊಂದು ಸಿಲಿಕಾನ್ ಛೇಂಬರ್ ಶೆಡ್ : ರುದ್ರಭೂಮಿಯಲ್ಲಿ ಈಗಾಗಲೇ 1 ಸಿಲಿಕಾನ್ ಛೇಂಬರ್ ಶೆಡ್ ಅನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಮತ್ತೊಂದು ಸಿಲಿಕಾನ್ ಛೇಂಬರ್ ಶೆಡ್ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ನಿರ್ಮಿಸಲಾಗುತ್ತದೆ. ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದು ಪ್ರಗತಿಯಲ್ಲಿದೆ. ಅತೀ ಶೀಘ್ರವಾಗಿ ನಿರ್ಮಾಣಗೊಳ್ಳಲಿದೆ.
ಭವ್ಯವಾಗಿ ನಿರ್ಮಾಣ : ವಿಶಾಲ ಜಾಗದಲ್ಲಿ ದಿ.ಆರ್ಬೆಟ್ಟು ವೆಂಕಟೇಶ ಕಾಮತ್ ಸುಸಜ್ಜಿತ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣಗೊಂಡಿದೆ. ಆವರಣ ಗೋಡೆ, ಸುತ್ತಲು ಗಿಡಗಳನ್ನು ನೆಡಲಾಗಿದೆ. ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿ ಸಕಲ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದೆ. ಧಾರ್ಮಿಕ ಕೇಂದ್ರದ ಪರಿಕಲ್ಪನೆಯಲ್ಲೇ ರುದ್ರಭೂಮಿಯ ನಿರ್ಮಾಣವಾಗಿದೆ. ರುದ್ರಭೂಮಿಯ ಪ್ರವೇಶಧ್ವಾರದಲ್ಲಿ “ಕಾವಲುಗಾರ” ನ ಪ್ರತಿಮೆ ನಿರ್ಮಿಸಲಾಗಿದೆ. ಎಡಬದಿಯಲ್ಲಿ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದೆ.
ಇನ್ನಷ್ಟು ನೆರವಿನ ಅಗತ್ಯ : ೩೮ನೇ ಕಳ್ತೂರು ಗ್ರಾಮ ಪಂಚಾಯಿತಿಯ ಸಹಕಾರ, ಅಭಿವೃದ್ಧಿ ಅಧಿಕಾರಿ ಸವಿತಾ ಎ.ಸಿ., ಯವರ ಸಹಕಾರ, ದಾನಿಗಳು ಸಂಪೂರ್ಣ ನೆರವು ಸಹಕಾರದಿಂದ ನಮ್ಮ ಕಲ್ಪನೆಯ ರುದ್ರಭೂಮಿ ನಿರ್ಮಾಣಗೊಂಡಿದೆ. ಇನ್ನಷ್ಟು ಅನುದಾನದ ಕೊರತೆಯಿದ್ದು ನೆರವು ನಿರೀಕ್ಷಿಸಲಾಗಿದೆ ಎಂದು ಚಂದ್ರಶೇಖರ ಶೆಟ್ಟಿಯವರು ತಿಳಿಸಿದ್ದಾರೆ.
ಸ್ಮಶಾನ ಅಭಿವೃದ್ಧಿ ಸಮಿತಿಯೇ ನಿರ್ವಹಿಸಲಿದೆ : ಸ್ಮಶಾನ ಅಭಿವೃದ್ಧಿ ಸಮಿತಿಯನ್ನು ನಿಯಮನುಸಾರ ನೊಂದಾವಣೆ ಮಾಡಲಾಗಿದ್ದು ೩೮ನೇ ಕಳ್ತೂರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಸಮಿತಿಯೇ ಸ್ಮಶಾನವನ್ನು ನಿರ್ವಹಣೆ ಮಾಡಲಿದೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದರು.
ಮೇಸ್ತ್ರಿ ಆದು ನಾಯ್ಕ್, ಪೈಂಟರ್ ಶ್ರೀನಿವಾಸ ನಾಯ್ಕ್ ಮತ್ತು ಎಲೆಕ್ಷ್ಟೀಷಿಯನ್ ರಾಘವೇಂದ್ರ ಆಚಾರ್ಯ ಮತ್ತವರ ತಂಡ ರುದ್ರಭೂಮಿ ನಿರ್ಮಾಣ ಹಿಂದೆ ವಿಶೇಷ ಶ್ರಮವಹಿಸಿದ್ದಾರೆ.
ಮಾರ್ಚ್ ೦8ರಂದು ಲೋಕಾರ್ಪಣೆ : 38ನೇ ಕಳ್ತೂರು ಗ್ರಾಮ ಪಂಚಾಯಿತಿ ಮತ್ತು ಸ್ಮಶಾನ ಅಭಿವೃದ್ಧಿ ಸಮಿತಿ ( ರಿ) ಸಹಯೋಗದೊಂದಿಗೆ ಕಳ್ತೂರು ಸಂತೆಕಟ್ಟೆ ಕೊಂಬೆ ರಸ್ತೆಯಲ್ಲಿ ನಿರ್ಮಾಣಗೊಂಡ ಆರ್ಬೆಟ್ಟು ದಿ.ವೆಂಕಟೇಶ ಕಾಮತ್ ಸಾರ್ವಜನಿಕ ಹಿಂದೂ ರುದ್ರಭೂಮಿಯ ಉದ್ಘಾಟನೆ ಮಾರ್ಚ್ ೦೮ರಂದು ಸಂಜೆ ೪ ಗಂಟೆಗೆ ನಡೆಯಲಿದೆ. ದಾನಿಗಳು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರು ಭಾಗವಹಿಸುವರು.
ವರದಿ – ಸುಕುಮಾರ್ ಮುನಿಯಾಲ್

