ಕೋಲಾರ: ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಯುವಕನೋರ್ವ ಹಣದ ಆಸೆಗಾಗಿ ಬೆಟ್ಟಿಂಗ್ ಕಟ್ಟಿ ಮದ್ಯಸೇವನೆ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಪೂಜಾರಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರ್ತಿಕ್ (21) ಜೂಜಾಟದಲ್ಲಿ ಮೃತಪಟ್ಟ ಯುವಕ. ಐದು ಬಾಟಲ್ ಮದ್ಯಕ್ಕೆ ಒಂದೇ ಒಂದು ಹನಿ ನೀರು ಬೆರೆಸದೇ ಕಚ್ಚಾ ಕುಡಿಯುವುದಾಗಿ ಕಾರ್ತಿಕ್ 10 ಸಾವಿರ ರೂ. ಹಣಕ್ಕೆ ಬಾಜಿ ಕಟ್ಟಿದ್ದಾನೆ. ಅದರಂತೆ ಸ್ವಲ್ಪೂ ನೀರು ಹಾಕಿಕೊಳ್ಳದೇ ಬರೋಬ್ಬರಿ ಐದು ಬಾಟಲಿ ಮದ್ಯವನ್ನು ಸೇವಿಸಿದ್ದಾನೆ. ಆದ್ರೆ, ಮದ್ಯ ದೇಹದೊಳಗೆ ಸೇರಿಕೊಳ್ಳುತ್ತಿದ್ದಂತೆಯೇ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾನೆ.
ಇದೇ ಪೂಜಾರಹಳ್ಳಿ ಗ್ರಾಮದ ವೆಂಕಟರಡ್ಡಿ, ಸುಬ್ರಮಣಿ ಮತ್ತು ಇತರೆ ಮೂವರೊಂದಿಗೆ ಬೆಟ್ಟಿಂಗ್ ಕಟ್ಟಿದ್ದ. ಐದು ಬಾಟಲ್ ಮದ್ಯಕ್ಕೆ ಒಂದು ಹನಿ ನೀರನ್ನೂ ಬೆರೆಸದೇ ಕುಡಿಯುವುದಾಗಿ ಎದುರಾಳಿ ವ್ಯಕ್ತಿಯೊಂದಿಗೆ 10 ಸಾವಿರ ರೂ. ಹಣಕ್ಕೆ ಬಾಜಿ ಕಟ್ಟಿದ್ದ. ಈ ವೇಳೆ ನೀನು 5 ಬಾಟಲಿ ಎಣ್ಣೆಯನ್ನು ರಾ ಹೊಡೆದರೆ (ನೀರು ಬೆರೆಸದೆ) ನಾನೊಬ್ಬನೇ 10 ಸಾವಿರ ರೂ. ಕೊಡುವುದಾಗಿ ವೆಂಕಟರೆಡ್ಡಿ ಸವಾಲು ಹಾಕಿದ್ದ. ಇನ್ನು ಮದ್ಯ ಸೇವನೆಯಲ್ಲಿ ನಾನು ಎಂದಿಗೂ ಸೋತಿಲ್ಲವೆಂದು ಕಾರ್ತಿಕ್ ಜಿದ್ದಿಗೆ ಬಿದ್ದು ಒಂದೂ ಚೂರು ನೀರು ಬೆರೆಸಿಕೊಳ್ಳದೇ 5 ಬಾಟಲಿ ಮದ್ಯವನ್ನು ಸೇವಿಸಿದ್ದಾನೆ.
ನಂತರ, ಮದ್ಯದ ಪ್ರಮಾಣ ಹೆಚ್ಚಾಗಿದ್ದರಿಂದ ತೀವ್ರ ಅಸ್ವಸ್ಥನಾದ ಕಾರ್ತಿಕ್, ನಾನು ಬದುಕುವುದಿಲ್ಲ ಆಸ್ಪತ್ರೆಗೆ ಸೇರಿಸಿ ನನ್ನ ಜೀವ ಉಳಿಸಿ ಎಂದು ಬೇಡಿಕೊಂಡಿದ್ದಾನೆ. ಕೂಡಲೇ ಸ್ನೇಹಿತರು ಮುಳಬಾಗಿಲು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಕಾರ್ತಿಕ್ ದೇಹ ಚಿಕಿತ್ಸೆಗೂ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಮದ್ಯಕ್ಕೆ ನೀರು ಬೆರೆಸದೇ ಸೇವನೆ ಮಾಡಿದರೆ ಪ್ರಾಣಕ್ಕೆ ಅಪಾಯ ಎನ್ನುವುದು ಗೊತ್ತಿದ್ದರೂ ಸಹ ಕಾರ್ತಿಕ್‌ಗೆ 5 ಬಾಟಲಿ ರಾ ಎಣ್ಣೆ ಹೊಡೆಯಲು ಸವಾಲು ಹಾಕಿದ್ದ ವೆಂಕಟರೆಡ್ಡಿ ಮತ್ತು ಸುಬ್ರಮಣಿ ಸೇರಿದಂತೆ ಆರು ಮಂದಿ ವಿರುದ್ದ ಕಾರ್ತಿಕ್ ಮನೆಯವರು ದೂರು ನೀಡಿದ್ದಾರೆ. ಈ ಸಂಬಂಧ ನಂಗಲಿ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ವೆಂಕಟರೆಡ್ಡಿ ಮತ್ತು ಸುಬ್ರಮಣಿ ಇಬ್ಬರನ್ನೂ ಬಂಧಿಸಿದ್ದು, ಇನ್ನುಳಿದವರಿಗೆ ಹುಡುಕಾಟ ನಡೆಸಿದ್ದಾರೆ.
ಕಾರ್ತಿಕ್ ಕಳೆದ ಒಂದು ವರ್ಷದ ಹಿಂದಷ್ಟೇ ಮದುವೆ ಮಾಡಿಕೊಂಡಿದ್ದ. ಗರ್ಭಿಣಿ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದು, ಎಣ್ಣೆಗೆ ದಾಸನಾಗಿದ್ದ. ತವರು ಮನೆ ಸೇರಿದ್ದ ಹೆಂಡತಿ ಕಳೆದ 8 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಳು. 21 ವರ್ಷ ಪೂರ್ಣಗೊಳ್ಳುವ ಮುನ್ನವೇ ಕಾರ್ತಿಕ್ ಅಪ್ಪನಾಗಿದ್ದಾನೆ. ಆದರೂ, ಜೀವನದ ಜವಾಬ್ದಾರಿಯನ್ನು ಅರಿತುಕೊಳ್ಳದೇ ಮದ್ಯ ಸೇವನೆ ಜೂಜಾಟಕ್ಕೆ ಬಿದ್ದು ಇದೀಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಇತ್ತ ತಾಯಿ-ಮಗು ಕುಟುಂಬ ಅಕ್ಷರಶಃ ದಿಕ್ಕು ತೋಚದಂತಾಗಿದ್ದಾರೆ. ಜಗತ್ತಿನ ಅರಿವೇ ಇಲ್ಲದ ಮಗುವಿಗೆ ಅಪ್ಪನಿಲ್ಲದೇ ಬೆಳೆಯುವ ಸ್ಥಿತಿ ಎದುರಾಗಿದೆ. ಬಾಣಂತಿ ಹೆಂಡತಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಗಂಡನನ್ನು ಕಳೆದಕೊಂಡು ಒಬ್ಬಂಟಿಯಾಗಿ ಜೀವನ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಅದೇನೇ ಹೇಳಿ ಹಣಕ್ಕಾಗಿ ಪ್ರಾಣಕ್ಕೆ ಕುತ್ತು ಬರುವ ಬಾಜಿ ಕಟ್ಟುವ ಮುನ್ನ ಕೊಂಚ ಯೋಚಿಸಿವುದು ಒಳಿತು. ಹಣದ ಆಸೆ, ಜಿದ್ದಿಗೆ ಬಿದ್ದರೆ ಅನಾವಶ್ಯಕವಾಗಿ ಪ್ರಾಣ ಕಳೆದುಕೊಳ್ಳುವುದು ಗ್ಯಾರಂಟಿ.