ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ‘ಆಟಿದ ಲೇಸ್’

0
21

ತುಳು ಸಾಹಿತ್ಯ: ಸುಗಿಪು – ದುನಿಪು

ಪುತ್ತೂರು : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ಪುತ್ತೂರು ಇದರ ತುಳು ಸಾಹಿತ್ಯ ಸಂಘ , ತುಳು ವರ್ಲ್ಡ್ ಫೌಂಡೇಶನ್ ಕಟೀಲು ಮತ್ತು ತುಳುವ ಮಹಾಸಭೆ ಪುತ್ತೂರು ತಾಲೂಕು ಇವರ ಜಂಟಿ ಆಶ್ರಯದಲ್ಲಿ ‘ಆಟಿದ ಲೇಸ್’ ತುಳು ಸಾಹಿತ್ಯ: ಸುಗಿಪು – ದುನಿಪು ಕಾರ್ಯಕ್ರಮ ಆಗಸ್ಟ್ 10 ಸೋಮವಾರ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ತುಳುನಾಡಿನ ಸಾಹಿತ್ಯ, ಸಂಸ್ಕೃತಿ – ಪರಂಪರೆ ಮತ್ತು ಆಟಿ ತಿಂಗಳ ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟನಿ ಪ್ರಕಾಶ್ ಮೊಂತೇರೊ ವಹಿಸಿದ್ದರು. ಅವರು ಮಾತನಾಡಿ ‘ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿ, ನಂಬಿಕೆ ಕರಾವಳಿ ಭಾಗದ ಎಲ್ಲಾ ಜಾತಿ ಜನಾಂಗದವರಿಗಿದೆ. ತುಳು ಎಂಬುದು ಶಾಂತಿ ಸೌಹಾರ್ದತೆಯ ಸುಂದರ ಜಗತ್ತು. ಅದಕ್ಕಾಗಿಯೇ ತುಳುವರ ಆಚಾರ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಸಲುವಾಗಿ ಕಾಲೇಜಿನಲ್ಲಿ ತುಳುನಾಡಿನ ಆಟಿ ತಿಂಗಳ ವಿಶೇಷತೆ ಬಗ್ಗೆ ಕಾರ್ಯಕ್ರಮ ಆಯೋಜಿಸಿದೆ’ ಎಂದರು.

ತುಳುವರ್ಲ್ಡ್ ಫೌಂಡೇಶನ್ ಕಟೀಲು ಇದರ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ ತೆಂಗಿನ ಕೊಂಬು ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಆಟಿ ತಿಂಗಳಲ್ಲಿ ತುಳುವರ ಜೀವನ ಪದ್ಧತಿ ಹಾಗೂ ತುಳುನಾಡಿನ ಸಾಂಪ್ರದಾಯಿಕ ಜ್ಞಾನ ಪರಂಪರೆಯ ಕುರಿತು ವಿವರಿಸಿದರು. ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ತುಳುವ ಮಹಾಸಭೆ ಪುತ್ತೂರು ವಲಯದ ಸಂಚಾಲಕ ಮನೋಹರ ರೈ ಮನವಳಿಕೆ, ಅಧ್ಯಕ್ಷೆ ವೇದಾವತಿ ರಾಜೇಶ್, ತುಳು ವರ್ಲ್ಡ್ ಫೌಂಡೇಶನ್ ಕಾರ್ಯದರ್ಶಿ ವಸಂತ ರೈ, ಸಮಿತಿ ಸದಸ್ಯರಾದ ಅರವಿಂದ ಬೆಳ್ಚಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.

‘ಬೀರದ ಬೊಲ್ಪು’ ಸುಗಿಪು – ದುನಿಪು: ಆಟಿದ ಲೇಸ್ ಅಂಗವಾಗಿ ಜರಗಿದ ‘ತುಳು ಸಾಹಿತ್ಯ: ಸುಗಿಪು – ದುನಿಪು’ ಕಾರ್ಯಕ್ರಮದಲ್ಲಿ ತುಳು ಮಹಾಕವಿ ಮಂದಾರ ಕೇಶವ ಭಟ್ಟರ ‘ಬೀರದ ಬೊಲ್ಪು’ ತುಳು ಕಾವ್ಯ ವಾಚನವನ್ನು ಉಪನ್ಯಾಸಕ ಪ್ರಶಾಂತ ರೈ ಪುತ್ತೂರು ಮತ್ತು ವಿದ್ಯಾರ್ಥಿನಿ ಸೌಪರ್ಣಿಕಾ ನಡೆಸಿಕೊಟ್ಟರು. ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ಕಾವ್ಯದ ‘ಎಲ್ಯ ಬಾಲೆದ ಮಲ್ಲ ಬೇಲೆ’ ಅಧ್ಯಾಯದಲ್ಲಿ ಬರುವ ಶ್ರೀ ಕೃಷ್ಣನ ಬಾಲ ಲೀಲೆಯ ವೃತ್ತಾಂತವನ್ನು ವ್ಯಾಖ್ಯಾನ ಮಾಡಿದರು.

ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ತುಳು ಸಾಹಿತ್ಯ ಸಂಘದ ಸಂಯೋಜಕ ಪ್ರಶಾಂತ ರೈ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಬಿ. ವಂದಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಉಪನ್ಯಾಸಕರು ಮತ್ತು ತುಳು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.