ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಚೋದನೆ; ಆರೋಪಿಯ ಬಂಧನ

0
6

ಉಡುಪಿ: ಮಣಿಪಾಲದ ಕಾಲೇಜು ವಿದ್ಯಾರ್ಥಿನಿ ಪೌಲಾ ಲೆಸ್ಲಿ ವಾರ್ಜ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಓರ್ವ ಯುವಕನನ್ನು ಮಣಿಪಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇಂದ್ರಾಡಳಿತ ಪ್ರದೇಶ ದೀಯು ದಮನ್‌ನ ಅಲೋಕ್ ಸಿಟಿ ನಿವಾಸಿ ಸಾಯಿ ಸಂಜಯ್ ಬಿಂಗಾರೆ ಅಲಿಯಾಸ್‌ ಸಂಜಯ್‌ ಪಾಟೀಲ್‌ (21) ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ
ಮಣಿಪಾಲ ಕಾಲೇಜಿನಲ್ಲಿ 2ನೇ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದ ಅಸ್ಸಾಂ ರಾಜ್ಯದ ನಾಗಾಂವ್ ನಿವಾಸಿ ಲೆಸ್ಲಿ ಜೋಸೆಫ್ ಮ್ಯಾಥ್ಯೂ ಅವರ ಮಗಳು ಪೌಲಾ ಲೆಸ್ಲಿ ವಾರ್ಜ್ರಿ ನವೆಂಬರ್‌ 2025ರಲ್ಲಿ ಕಾಯಿನ್ ಸರ್ಕಲ್ ಬಳಿಯ ಐರಿಸ್ ಪ್ಲಾಜಾ ಕಟ್ಟಡದ ರೂಂ ನಂ. 504 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆದು ಅಂತಿಮ ವರದಿ ಸಲ್ಲಿಸಲಾಗಿತ್ತು. ಪ್ರಕರಣ ಮುಕ್ತಾಯಗೊಂಡ ನಂತರ, ಮೃತಳ ವಶದಲ್ಲಿದ್ದ ಆಪಲ್ ಐಪ್ಯಾಡ್, ಐಫೋನ್, ಮೊಬೈಲ್ ಹಾಗೂ ಡೈರಿಯನ್ನು ಆಕೆಯ ತಂದೆ ಲೆಸ್ಲಿ ಜೋಸೆಫ್ ಮ್ಯಾಥ್ಯೂ ಅವರಿಗೆ ಹಸ್ತಾಂತರಿಸಲಾಗಿತ್ತು. ತಂದೆ ಮಗಳ ಡಿಜಿಟಲ್ ದಾಖಲೆಗಳು ಹಾಗೂ ಡೈರಿಯನ್ನು ಪರಿಶೀಲಿಸಿದಾಗ, ಆರೋಪಿ ಸಾಯಿ ಸಂಜಯ್ ಸ್ನ್ಯಾಪ್‌ಚಾಟ್ (Snapchat) ಮೂಲಕ ಸತತವಾಗಿ ಸಂಪರ್ಕದಲ್ಲಿದ್ದು, ಆಕೆಗೆ ನಿರಂತರ ಕಿರುಕುಳ, ಬಲವಂತ ಹಾಗೂ ಬ್ಲ್ಯಾಕ್‌ಮೇಲ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಕುರಿತು ಮೃತಳ ತಂದೆ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯದ ಸೂಚನೆಯಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿಯ ಬಂಧನ
ಮಣಿಪಾಲ ಠಾಣಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡು, ಆರೋಪಿಯನ್ನುಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.