ಕಟೀಲ್ : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಕರ್ನಾಟಕ ರಾಜ್ಯ ಪ್ರಧಾನ ಸಂಚಾಲಕರಾಗಿ ಯುವ ತಾಂತ್ರಿಕ ವೃತ್ತಿಪರ, ಸಾಂಸ್ಕೃತಿಕ ಚಿಂತಕ ಹಾಗೂ ತುಳು ಸಂಸ್ಕೃತಿಯ ಅಭಿಮಾನಿ ಅಭಿಷೇಕ್ ಕೆ. ಕಾರ್ಕಳ ಅವರನ್ನು ನೇಮಕ ಮಾಡಲಾಗಿದೆ.
1993ರ ನವೆಂಬರ್ 21ರಂದು ಜನಿಸಿದ ಅಭಿಷೇಕ್ ಕೆ. ಕಾರ್ಕಳ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಸಂಸ್ಥೆಯೊಂದರಲ್ಲಿ ಸ್ಯಾಟಲೈಟ್ ಕಮ್ಯುನಿಕೇಷನ್ಸ್ (Satellite Communications) ಹಾಗೂ ಜಿ.ಪಿ.ಎಸ್. (GPS) ತಂತ್ರಜ್ಞಾನ ವಿಭಾಗದ ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವೃತ್ತಿಜೀವನದ ಜೊತೆಗೆ ತುಳುನಾಡಿನ ಇತಿಹಾಸ, ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರು, ತುಳುನಾಡು ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರಕಲೆಯಲ್ಲಿ ವಿಶೇಷ ಪ್ರತಿಭೆ ಹೊಂದಿರುವ ಅವರು, “Safety of Nature” ಎಂಬ ಚಿತ್ರಕೃತಿಗೆ 2010ರಲ್ಲಿ ಭಾರತದ ಆಗಿನ ಉಪರಾಷ್ಟ್ರಪತಿ ಎಂ. ಹಮೀದ್ ಅನ್ಸಾರಿ ಹಾಗೂ ಮಧ್ಯಪ್ರದೇಶದ ಆಗಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಂದ ರಾಷ್ಟ್ರೀಯ ಮಟ್ಟದ ಚಿನ್ನದ ಪದಕವನ್ನು ಪಡೆದಿದ್ದಾರೆ.
ತುಳುವ ಮಹಾಸಭೆಯ ಹಿರಿಯರ ಮಾರ್ಗದರ್ಶನದಲ್ಲಿ ಬೆಂಗಳೂರಿನ ತುಳುವರನ್ನು ಒಗ್ಗೂಡಿಸಿ ಸಮಾಜದ ಏಳಿಗೆಗಾಗಿ ಶ್ರಮಿಸುವುದರ ಜೊತೆಗೆ, ತುಳುನಾಡಿನ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಅವರ ಸಂಘಟನಾ ಸಾಮರ್ಥ್ಯ, ತಾಂತ್ರಿಕ ಪರಿಣತಿ, ಸಮಾಜಸೇವೆ ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ತುಳುನಾಡಿನ ಅಭಿವೃದ್ಧಿಯ ಮೇಲಿನ ಬದ್ಧತೆಯನ್ನು ಪರಿಗಣಿಸಿ, ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕರ್ನಾಟಕ ರಾಜ್ಯ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಮತ್ತು ಕೇಂದ್ರೀಯ ಅಧ್ಯಕ್ಷ ಅವಿನ್ ಬಿ ಆರ್ ಆಳ್ವ ಅವರು ಅಭಿಷೇಕ್ ಕಾರ್ಕಳ ಅವರನ್ನು ಕರ್ನಾಟಕ ರಾಜ್ಯ ಪ್ರಧಾನ ಸಂಚಾಲಕರಾಗಿ ನೇಮಕಗೊಳಿಸಿದ್ದಾರೆ.
ಈ ನೇಮಕವನ್ನು ಅಂತರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ತುಳುವರ್ಲ್ಡ್ ಫೌಂಡೇಶನ್ನ ಗೌರವಾಧ್ಯಕ್ಷ ಶ್ರೀಹರಿನಾರಾಯಣ ದಾಸ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹರ್ಷದಿಂದ ಸ್ವಾಗತಿಸಿ, ಅಭಿಷೇಕ್ ಕೆ. ಕಾರ್ಕಳ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ತುಳುವ ಮಹಾಸಭೆಯ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ ಹಾಗೂ 2028ರ ಶತಮಾನೋತ್ಸವದ ಅಂಗವಾಗಿ ತುಳು ಭಾಷೆ, ಸಂಸ್ಕೃತಿ ಮತ್ತು ತುಳುವರ ಏಕತೆಯ ಕಾರ್ಯಗಳಿಗೆ ಹೊಸ ಚೈತನ್ಯ ದೊರಕಲಿ ಎಂದು ಶುಭ ಹಾರೈಸಿದ್ದಾರೆ.

