
ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಉಡುಪಿ ನಗರ ವತಿಯಿಂದ ಕಡಿಯಾಳಿಯ ಕಾತ್ಯಾಯಿನಿ ಮಂಟಪದಲ್ಲಿ ಅ.10ರಂದು ನಗರದ ಅಭ್ಯಾಸ ವರ್ಗ ನಡೆಯಿತು.
ಕಾರ್ಯಕ್ರಮವನ್ನು ಡಾ. ಸತ್ಯನಾರಾಯಣ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಎಸ್ಎಫ್ಡಿ ಸಂಯೋಜಕ ಅನಂತ ಕೃಷ್ಣ, ಉಡುಪಿ ಜಿಲ್ಲಾ ಸಂಚಾಲಕ ರಂಜಿತ್ ಸಿದ್ದಾಪುರ ಹಾಗೂ ತಾಲೂಕು ವಿದ್ಯಾರ್ಥಿನಿ ಪ್ರಮುಖ್ ನಿಹಾರಿಕಾ ಪೈ ಉಪಸ್ಥಿತರಿದ್ದರು.

ಅಭ್ಯಾಸ ವರ್ಗದಲ್ಲಿ ವಿವಿಧ ಅವಧಿಗಳ ಮೂಲಕ ಕಾರ್ಯಕರ್ತರಿಗೆ ಸಂಘಟನಾ ಹಾಗೂ ಕಾರ್ಯಚಟುವಟಿಕೆಗಳ ಕುರಿತು ತರಬೇತಿ ನೀಡಲಾಯಿತು. ಮೊದಲ ಅವಧಿಯಲ್ಲಿ ‘ಸೈದ್ಧಾಂತಿಕ ಭೂಮಿಕೆ’ ವಿಷಯದ ಕುರಿತು ಡಾ. ಶಿವಾನಂದ ನಾಯಕ್ ಮಾರ್ಗದರ್ಶನ ನೀಡಿದರು. ಎರಡನೇ ಅವಧಿಯಲ್ಲಿ ‘ಕ್ಯಾಂಪಸ್ ಕಾರ್ಯ’ ಕುರಿತು ರಾಜ್ಯ ಸಹ ಕಾರ್ಯದರ್ಶಿ ಸುವಿತ್ ಶೆಟ್ಟಿ ಮಾಹಿತಿ ನೀಡಿದರು. ಕೊನೆಯ ಅವಧಿಯಲ್ಲಿ ‘ಪ್ರಶಿಕ್ಷಣ’ ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತ ಅಜಿತ್ ಜೋಗಿ ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಎಬಿವಿಪಿ ಉಡುಪಿ ನಗರದ 2026-27ನೇ ಸಾಲಿನ ವಿವಿಧ ಜವಾಬ್ದಾರಿಗಳನ್ನು ಘೋಷಿಸಲಾಯಿತು. ಸಂಚಿತ್ ಶೆಟ್ಟಿ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಪ್ರವೀಣ್ ಆಚಾರ್ಯ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಕಾರ್ಯಕರ್ತರಿಗೆ ವಹಿಸಲಾಯಿತು.

ಅಭ್ಯಾಸ ವರ್ಗದ ಮೂಲಕ ವಿದ್ಯಾರ್ಥಿ ಸಂಘಟನೆಯ ಕಾರ್ಯವೈಖರಿ, ಸೈದ್ಧಾಂತಿಕ ವಿಚಾರಗಳು ಹಾಗೂ ಕ್ಯಾಂಪಸ್ ಚಟುವಟಿಕೆಗಳ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಯಿತು.
