ಕಾರ್ಕಳ : ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದಭೂಷಣ ಎಂ ವಿ ಶಾಸ್ತ್ರೀ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಶಾಲೆಯ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಂಕದಕಟ್ಟೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೆಟ್ಟಿ ಅವರು ಊರಿನ ವಿವಿಧ ದಾನಿಗಳ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಭರಿಸಿದ ಶೈಕ್ಷಣಿಕ ದತ್ತು ಸ್ವೀಕಾರವನ್ನು ಘೋಷಣೆ ಮಾಡಿದರು. ಹಾಗೆಯೇ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶಕ್ಕೆ ಕಾರಣರಾದ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ದಾನಿಗಳಾದ ಜಯ ಎಸ್ ಕೋಟ್ಯಾನ್ ಮತ್ತು ದೀಪಕ್ ಕೋಟ್ಯಾನ್ ಅವರ ಕೊಡುಗೆಯಾದ ತಲಾ ಎರಡು ಸಾವಿರ ನಗದು ಬಹುಮಾನಗಳ ಜೊತೆಗೆ ಸನ್ಮಾನಿಸಲಾಯಿತು. ಹಾಗೆಯೇ ಶಾಲೆಯ ಎಲ್ಲ ಅಧ್ಯಾಪಕರನ್ನು ಅತಿಥಿಗಳು ಸನ್ಮಾನಿಸಿದರು.
ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ಸಮೀಕ್ಷಾ ಮತ್ತು ಕೃಷ್ಣಮೂರ್ತಿ ಅವರಿಗೆ ಶಾಲೆಯ ಸ್ಥಾಪಕ ಕಾರ್ಯದರ್ಶಿ ಡಾಕ್ಟರ್ ಎನ್ ಜೆ ಉಷಾರಾವ್ ಅವರ ನೆನಪಿನಲ್ಲಿ ತಲಾ 5,000 ರೂಗಳ ವಿದ್ಯಾರ್ಥಿವೇತನಗಳನ್ನು ನೀಡಿ ಅಭಿನಂದಿಸಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬರೆಯುವ ಪುಸ್ತಕ, ಸ್ಕೂಲ್ ಬ್ಯಾಗ್, ಕೊಡೆ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಸಮಾರಂಭದ ಅತಿಥಿಯಾದ ನಿವೃತ್ತ ಶಿಕ್ಷಕ ವಸಂತ್ ಎಂ ಅವರು ಹಸ್ತಾಂತರ ಮಾಡಿ ವಿಜೇತರನ್ನು ಅಭಿನಂದಿಸಿದರು. ಅವರು ಮಾತನಾಡಿ ಈ ಕನ್ನಡ ಮಾಧ್ಯಮ ಶಾಲೆಯನ್ನು ಬೆಂಬಲಿಸುತ್ತಿರುವ ಊರಿನ ದಾನಿಗಳನ್ನು ಮತ್ತು ಈ ಶಾಲೆಯ ಆಡಳಿತ ಮಂಡಳಿಯ ಕೊಡುಗೆಯನ್ನು ಅಭಿನಂದಿಸಿದರು.
ಇನ್ನಾ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಾಚೂರು ಪರಾಡಿ ದಿವಾಕರ ಆರ್ ಶೆಟ್ಟಿಯವರು ಎಂ ವಿ ಶಾಸ್ತ್ರಿಯವರ ಭಾವಚಿತ್ರದ ಎದುರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶಾಲೆಯ ಸಂಚಾಲಕರಾದ ಸತೀಶ್ ಸದಾನಂದ ಅವರು ಸಂಸ್ಥಾಪಕರ ಬದುಕು ಮತ್ತು ಸಾಧನೆಗಳ ಬಗ್ಗೆ ವಿವರಿಸಿದರು. ದಾನಿಗಳಾದ ಇನ್ನಾ ಬೀಡು ದಿನೇಶ್ ಶೆಟ್ಟಿ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿವೇತನಗಳ ಪ್ರಾಯೋಜಕರಾದ ಜಯ ಎಸ್ ಕೋಟ್ಯಾನ್ ಮತ್ತು ದೀಪಕ್ ಕೋಟ್ಯಾನ್ ಅವರ ಪರವಾಗಿ ಅವರ ತಾಯಿ ಸುಲೋಚನಾ ಕೋಟ್ಯಾನ್ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ರಾಜೇಂದ್ರ ಭಟ್ ಕೆ ಅವರು ಅತಿಥಿಗಳನ್ನು ಸ್ವಾಗತ ಮಾಡಿದರು. ಸಹಶಿಕ್ಷಕಿ ವಾಣಿ ಮತ್ತು ಸೌಮ್ಯಾ ಆರ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಿಕ್ಷಕ ಉಮೇಶ್ ಆಚಾರ್ಯ ಅವರು ಧನ್ಯವಾದ ನೀಡಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ನೀಡಲ್ಪಟ್ಟ ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಯಿತು.

