ಸುರತ್ಕಲ್‌ನಲ್ಲಿ ಅವಘಡ : ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

0
8

ಸುರತ್ಕಲ್ : ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತರನ್ನು ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣ ಸಮೀಪದ ನಿವಾಸಿ ಭಾಸ್ಕರ ಎಂದು ಗುರುತಿಸಲಾಗಿದೆ. ಅವರು ಶೀಟ್ ಮೇಲ್ಛಾವಣಿ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರರಾಗಿದ್ದರು ಎನ್ನಲಾಗಿದೆ.

ಕೃಷ್ಣಾಪುರ 6ನೇ ಬ್ಲಾಕ್‌ನ ವಸತಿ ಸಮುಚ್ಚಯವೊಂದರ ತಗಡು ಶೀಟ್ ಮೇಲ್ಛಾವಣಿ ನಿರ್ಮಾಣಕ್ಕಾಗಿ ಭಾಸ್ಕರ ಅವರು ಕಬ್ಬಿಣದ ರಾಡ್ ಬಳಸಿ ಅಳತೆ ಮಾಡುತ್ತಿದ್ದರು. ಈ ವೇಳೆ ಕಬ್ಬಿಣದ ರಾಡ್‌ನ್ನು ಕಂಕುಳಲ್ಲಿಟ್ಟುಕೊಂಡು ತಿರುಗುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಹೈಟೆನ್ಶನ್ ವಿದ್ಯುತ್ ತಂತಿಗೆ ರಾಡ್ ತಾಗಿದೆ ಎನ್ನಲಾಗಿದೆ.

ವಿದ್ಯುತ್ ತಂತಿಗೆ ರಾಡ್ ಸ್ಪರ್ಶಿಸಿದ ಪರಿಣಾಮ ಭಾಸ್ಕರ ಅವರ ದೇಹಕ್ಕೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದು ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಭಾಸ್ಕರ ಅವರ ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.