ಕೊಲ್ಲೂರು ದೇವಸ್ಥಾನದ ಬಳಿ ಅವಘಡ : ಭಕ್ತರ ಮೇಲೆ ಬಿದ್ದ ಬೃಹತ್ ಲೈಟ್ ಸೆಟ್

0
12

ಉಡುಪಿ : ನವರಾತ್ರಿ ಸಂಭ್ರಮದ ನಡುವೆ ಬೈಂದೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಅವಘಡ ಸಂಭವಿಸಿದೆ. ಬಲವಾದ ಗಾಳಿ ಬೀಸಿದ ಪರಿಣಾಮ ದೇವಸ್ಥಾನದ ಎದುರಿನ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಬೃಹತ್ ಅಲಂಕಾರಿಕ ಲೈಟ್ ಸೆಟ್ ಭಕ್ತರ ಮೇಲೆ ಬಿದ್ದಿದೆ.

ಬಿಸಿಲಿನಿಂದ ರಕ್ಷಣೆ ಪಡೆಯಲು ಕಟ್ಟಡದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ಲೈಟ್ ಸೆಟ್ ಬಿದ್ದ ಪರಿಣಾಮ ವಯೋವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇವಸ್ಥಾನದ ಮುಂಭಾಗದಲ್ಲೇ ಅವಘಡ ಸಂಭವಿಸಿರುವುದು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ದೇವಸ್ಥಾನದ ಸುತ್ತಮುತ್ತ ಅಳವಡಿಸಲಾಗಿರುವ ಅಲಂಕಾರಿಕ ದೀಪಗಳು, ತಾತ್ಕಾಲಿಕ ರಚನೆಗಳು ಹಾಗೂ ಇತರ ವ್ಯವಸ್ಥೆಗಳ ಸುರಕ್ಷತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.